ನವದೆಹಲಿ: ರಾಹುಲ್ ಗಾಂಧಿ ಅವರ ಪತ್ರದೊಂದಿಗೆ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ 'ಹಾಥ್ ಸೇ ಹಾಥ್ ಜೋಡೋ ಯಾತ್ರೆ'ಗೆ ಮುನ್ನ ಕಾಂಗ್ರೆಸ್ ಬುಧವಾರ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸಲಿದೆ. ನೀಡಿದ ಭರವಸೆಗಳನ್ನು ಬಿಜೆಪಿ ಈಡೇರಿಸದ ಬಗ್ಗೆ ಜನರ ಗಮನ ಸೆಳೆಯಲು ಒಟ್ಟು 22 ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಜನರನ್ನು ಸಂಪರ್ಕಿಸುವ ಕಾರ್ಯಕ್ರಮದ ಭಾಗವಾಗಿ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬರೆದ ಪತ್ರವನ್ನು ಜನವರಿ 26 ರಿಂದ ಕೇಂದ್ರ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಜೊತೆಗೆ ಪ್ರತಿ ಮನೆಗೆ ತಲುಪಿಸುವುದಾಗಿ ಘೋಷಿಸಿದೆ. ಎರಡು ತಿಂಗಳ ಸುದೀರ್ಘ ಕಾಲ ನಡೆಯಲಿರುವ ಈ ಕಾರ್ಯಕ್ರಮ, 2.5 ಲಕ್ಷ ಗ್ರಾಮ ಪಂಚಾಯಿತಿಗಳು, ಆರು ಲಕ್ಷ ಗ್ರಾಮಗಳು ಮತ್ತು 10 ಲಕ್ಷ ಬೂತ್‌ಗಳ ವ್ಯಾಪ್ತಿಯಲ್ಲಿ ನಡೆಯಲಿದೆ. ಕಾಂಗ್ರೆಸ್ ತನ್ನ ರಾಜಕೀಯ ಸಂದೇಶವನ್ನು ಜನರ ಬಳಿಗೆ ಕೊಂಡೊಯ್ಯಲು ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮ ಇದಾಗಿದೆ.
ನಮ್ಮ ಗುರಿ ಮುಟ್ಟುತ್ತೇವೆ: 'ಹಾಥ್ ಸೇ ಹಾಥ್ ಜೋಡೋ' ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಹಿರಿಯ ನಾಯಕ ಜೈರಾಮ್ ರಮೇಶ್, ಇದು ಭಾರತ್ ಜೋಡೋ ಯಾತ್ರೆಯಿಂದ ಪಕ್ಷದ ಚಿಹ್ನೆ ಮತ್ತು ರಾಜಕೀಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ. ಆದಾಗ್ಯೂ, ಕೆಲ ರಾಜ್ಯಗಳಲ್ಲಿ ಪಕ್ಷ ದುರ್ಬಲವಾಗಿದ್ದರೂ ಗುರಿಯನ್ನು ಮುಟ್ಟಲಾಗುವುದು ಎಂದು ಅವರು ಹೇಳಿದರು. ರಾಹುಲ್ ಗಾಂಧಿ ಬರೆದ ಪತ್ರದಲ್ಲಿ - ಕಣ್ಣಿಗೆ ಕಾಣುವಂತೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿದೆ. ಯುವಜನರಲ್ಲಿ ನಿರುದ್ಯೋಗ, ಅಸಹನೀಯ ಬೆಲೆ ಏರಿಕೆ, ತೀವ್ರ ಕೃಷಿ ಸಂಕಷ್ಟ ಮತ್ತು ದೇಶದ ಸಂಪೂರ್ಣ ಸಂಪತ್ತನ್ನು ಕಾರ್ಪೊರೇಟ್ಗಳು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ.
ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ಊರ್ಮಿಳಾ ಮಾತೋಂಡ್ಕರ್: ಇಂದು ಬೆಳಗ್ಗೆ ಜಮ್ಮುವಿನ ಗ್ಯಾರಿಸನ್ ಟೌನ್ ನಗ್ರೋಟಾದಿಂದ ಪುನರಾರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಸೇರಿಕೊಂಡರು. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 8 ಗಂಟೆ ಸುಮಾರಿಗೆ ಸೇನಾ ಗ್ಯಾರಿಸನ್ ಬಳಿಯಿಂದ ಯಾತ್ರೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಮಾತೋಂಡ್ಕರ್ ಆಗಮಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರನ್ನು ಸ್ವಾಗತಿಸಲು ಮಾರ್ಗದ ಉದ್ದಕ್ಕೂ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು. 48 ವರ್ಷದ ಊರ್ಮಿಳಾ ಮಾತೋಂಡ್ಕರ್ ಅವರು ಆರು ತಿಂಗಳ ಕಾಲ ಕಾಂಗ್ರೆಸ್ನಲ್ಲಿದ್ದು, 2019 ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು ಮತ್ತು 2020 ರಲ್ಲಿ ಶಿವಸೇನೆಗೆ ಸೇರಿದ್ದರು.
ಖ್ಯಾತ ಲೇಖಕ ಪೆರುಮಾಳ್ ಮುರುಗನ್ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ, ಜಿಎ ಮೀರ್ ಮತ್ತು ಮಾಜಿ ಸಚಿವ ಅಬ್ದುಲ್ ಹಮೀದ್ ಕರ್ರಾ ಮುಂತಾದವರು ನೂರಾರು ಕಾರ್ಯಕರ್ತರೊಂದಿಗೆ ತ್ರಿವರ್ಣ ಧ್ವಜ ಹಿಡಿದು ರಾಹುಲ್ ಅವರೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಗುರುವಾರ ಪಂಜಾಬ್‌ನಿಂದ ಜಮ್ಮು-ಕಾಶ್ಮೀರ ಪ್ರವೇಶಿಸಿ ಸೋಮವಾರ ಜಮ್ಮು ನಗರಕ್ಕೆ ತಲುಪಿತ್ತು.