ನವದೆಹಲಿ: ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ಹಿಂದುಳಿದ ವರ್ಗಗಳ ಓಲೈಕೆಗೆ ಕಾಂಗ್ರೆಸ್ ಸಜ್ಜಾಗಿದೆ. ಸುಮಾರು 52 ಪ್ರತಿಶತ ಮತದಾರರನ್ನು ಹೊಂದಿರುವ ಸಮುದಾಯದಿಂದ ಗಮನಾರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೈ ಪಕ್ಷ ಯೋಜಿಸುತ್ತಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಸಮುದಾಯ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲು ಮೂವರು ಒಬಿಸಿ ಮುಖ್ಯಮಂತ್ರಿಗಳಾದ ಕರ್ನಾಟಕದ ಸಿದ್ದರಾಮಯ್ಯ, ರಾಜಸ್ಥಾನದ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್‌ಗಢದ ಭೂಪೇಶ್ ಬಘೇಲ್ ಅವರನ್ನು ಆಹ್ವಾನಿಸಲು ಮುಂದಾಗಿದೆ.
ಹೌದು, ರಾಜ್ಯದಲ್ಲಿ ಸರಿಸುಮಾರು ಶೇ.52ರಷ್ಟು ಮತದಾರರಿರುವ ಒಬಿಸಿಗಳ ಮೇಲೆ ನಾವು ಕೇಂದ್ರೀಕರಿಸುತ್ತಿದ್ದೇವೆ. ನಮ್ಮ ಮುಖ್ಯಮಂತ್ರಿಗಳನ್ನು ನೋಡಲು ನಾವು ಆಶಿಸುತ್ತಿರುವ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಅವರಿಂದಲೇ ಸಮುದಾಯ ಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಡಿಸಲು ಯೋಜಿಸುತ್ತಿದ್ದೇವೆ ಎಂದು ತೆಲಂಗಾಣದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ರಾವ್ ಠಾಕ್ರೆ 'ಈಟಿವಿ ಭಾರತ್'ಗೆ ತಿಳಿಸಿದರು.
ಕಾಂಗ್ರೆಸ್ನ ರಾಜಕೀಯ ಪರಿಣತರ ಪ್ರಕಾರ, ಅಕ್ಟೋಬರ್ 10ರೊಳಗೆ ಒಬಿಸಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ ತಮ್ಮದೇ ಗಣನೀಯ ಪ್ರಭಾವವನ್ನು ಹೊಂದಿರುವ ಸಿದ್ದರಾಮಯ್ಯ ನೆರೆಯ ತೆಲಂಗಾಣದಲ್ಲೂ ಮತದಾರರನ್ನು ಓಲೈಸಬಹುದು ಎಂಬ ಲೆಕ್ಕಾಚಾರ ಹೊಂದಲಾಗಿದೆ.
ಕರ್ನಾಟಕದಲ್ಲಿ ನಮ್ಮ ಚುನಾವಣಾ ಪ್ರದರ್ಶನವು ತೆಲಂಗಾಣದಲ್ಲೂ ಪ್ರಭಾವ ಬೀರುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ನಾಯಕಿ ಸೋನಿಯಾ ಗಾಂಧಿ ತೆಲಂಗಾಣದ ಮತದಾರರಿಗೆ ಆರು ಭರವಸೆಗಳನ್ನು ನೀಡಿದ್ದಾರೆ. ಕಾಂಗ್ರೆಸ್ ತನ್ನ ಭರವಸೆಗಳನ್ನು ಈಡೇರಿಸಲಿದೆ ಎಂಬುದನ್ನು ಸಿದ್ದರಾಮಯ್ಯ ಉಪಸ್ಥಿತಿ ತೋರಿಸುತ್ತದೆ ಎಂದು ಮಾಣಿಕ್ರಾವ್ ಹೇಳಿದರು.
ಮುಂದುವರಿದು, ಪಕ್ಷದಲ್ಲಿ ಹಿಂದುಳಿದ ವರ್ಗದವರು ಹೊಂದಿರುವ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ ಎಂಬುವುದನ್ನು ಜನತೆ ಮುಂದೆ ಎತ್ತಿ ತೋರಿಸಲು ರಾಜಸ್ಥಾನದ ಸಿಎಂ ಗೆಹ್ಲೋಟ್ ಮತ್ತು ಛತ್ತೀಸ್‌ಗಢದ ಸಿಎಂ ಬಘೇಲ್ ಅವರಿಗೂ ಆಹ್ವಾನ ಕೊಡಲಾಗುತ್ತಿದೆ. ಜೊತೆಗೆ ಆಯಾ ರಾಜ್ಯಗಳಲ್ಲಿ ಜಾರಿಗೊಳಿಸುತ್ತಿರುವ ವಿವಿಧ ಜನಕಲ್ಯಾಣ ಯೋಜನೆಗಳನ್ನು ಇಬ್ಬರು ಮುಖ್ಯಮಂತ್ರಿಗಳ ಮೂಲಕ ಜನತೆಗೆ ಖಾತ್ರಿ ಪಡಿಸಲು ಕಾಂಗ್ರೆಸ್ ಆಲೋಚಿಸಿದೆ.
ಅಲ್ಲದೇ, ರಾಜ್ಯದ ಒಟ್ಟು 119 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳು ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾಗಿವೆ. ಆದರೆ, ಪ್ರತಿಸ್ಪರ್ಧಿಗಳಾದ ಬಿಆರ್‌ಎಸ್ ಮತ್ತು ಬಿಜೆಪಿಯನ್ನು ಹಿಂದಿಕ್ಕಲು ಸುಮಾರು 34 ಕ್ಷೇತ್ರಗಳನ್ನು ತಮ್ಮ ಸಮುದಾಯಗಳಿಗೆ ನೀಡಬೇಕು ಎಂದು ಒಬಿಸಿ ನಾಯಕರು ತಮ್ಮ ಬೇಡಿಕೆಯನ್ನು ಮಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಣಿಕ್ರಾವ್ ಠಾಕ್ರೆ, ನಾವು ಒಬಿಸಿಗಳಿಗೂ ಹೆಚ್ಚಿನ ಟಿಕೆಟ್ ನೀಡುತ್ತಿವೆ. ಎಷ್ಟು ಎಂದು ನಾನು ಹೇಳುವುದಿಲ್ಲ. ಆದರೆ, ನಮ್ಮ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಟಿಕೆಟ್ಗಳು ಒಬಿಸಿಗಳಿಗೆ ನೀಡುವುದು ಮಾತ್ರ ಖಂಡಿತ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ, 80ಕ್ಕೂ ಹೆಚ್ಚು ಒಬಿಸಿ ಅಭ್ಯರ್ಥಿಗಳು ತಲಾ 50,000 ರೂಪಾಯಿ ಶುಲ್ಕವನ್ನು ಪಾವತಿಸಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ ಅಂಜನ್ ಕುಮಾರ್ ಯಾದವ್ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿ, ನಾವು ಒಬಿಸಿಗಳಿಗೆ 34 ವಿಧಾನಸಭಾ ಸ್ಥಾನಗಳು ಮತ್ತು ಕನಿಷ್ಠ ಎರಡು ಲೋಕಸಭಾ ಕ್ಷೇತ್ರಗಳನ್ನು ಕೇಳುತ್ತಿದ್ದೇವೆ. ನಾವು ಶೇ.50ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಟಿಕೆಟ್ ಸಿಕ್ಕರೆ ಈ ಬಾರಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈ ಕುರಿತು ನಮ್ಮ ನಾಯಕರಾದ ಮಧು ಯಾಶ್ಕಿ ಗೌಡ್ ಮತ್ತು ಮಹೇಶ್ ಕುಮಾರ್ ಗೌಡ್ ನಿಯೋಗವು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸಗಢಗಳಲ್ಲಿ ಗೆದ್ದೇ ಗೆಲ್ತೀವಿ; ರಾಹುಲ್ ಗಾಂಧಿ ವಿಶ್ವಾಸ