ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಹಾಗು ಮಾಜಿ ಕಾಂಗ್ರೆಸ್ ನಾಯಕ ಅಶ್ವನಿ ಕುಮಾರ್, ಕಾಂಗ್ರೆಸ್ನ ನೀರಸ ಪ್ರದರ್ಶನ ಕಾಂಗ್ರೆಸನ್ನು ಕೇವಲ ಪ್ರಾದೇಶಿಕ ಪಕ್ಷವಾಗಿ ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿರುವ ಅಶ್ವನಿ ಕುಮಾರ್ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಪಕ್ಷದ ಇಂದಿನ ಪರಿಸ್ಥಿತಿಯ ಬಗ್ಗೆ ನಾನು ಖುಷಿಯಾಗಿಲ್ಲ. ಆದರೆ ಭವಿಷ್ಯದಲ್ಲಿ ಕಾಂಗ್ರೆಸ್ಸಿನ ರಾಜಕೀಯ ಪ್ರಸ್ತುತತೆ ಮಾತ್ರ ನಗಣ್ಯವಾಗಲಿದೆ. ಪಕ್ಷದ ಕೊಡುಗೆಯೂ ಕಡೆಗಣಿಸಲ್ಪಡಲಿದೆ. ಈಗ ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ, ಕಾಂಗ್ರೆಸ್ ಕೇವಲ ಪ್ರಾದೇಶಿಕ ಪಕ್ಷವಾಗಿ ಉಳಿಯುತ್ತದೆ ಎಂದು ಭವಿಷ್ಯ ನುಡಿದರು.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಅವರು, ಫಲಿತಾಂಶಗಳು ರಾಜಕೀಯ ದೃಷ್ಟಿಕೋನವನ್ನೇ ಬದಲಾಯಿಸಲಿವೆ ಎಂದರು. ಪಂಜಾಬ್‌ನಲ್ಲಿ ಎಎಪಿ ನಡೆದುಕೊಂಡ ರೀತಿಯನ್ನು ಗಮನಿಸಿಯೇ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಯುವ ಭಾರತ ಮತ್ತು ಹೊಸ ರಾಜಕೀಯದ ಕನಸು ಕಾಣುತ್ತಿರುವ ಜನರು, ಸ್ಥಾಪಿತ ರಾಜಕೀಯ ಪಕ್ಷಗಳಿಂದ ಬೇಸತ್ತಿರುವುದನ್ನು ಇದು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು.
ಘನತೆಯಿಂದ ಕೆಲಸ ಮಾಡಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಪಕ್ಷ ತೊರೆದೆ. ಈ ಚುನವಣಾ ಫಲಿತಾಂಶವನ್ನು ಗಮನಿಸಿದಾಗ ಜನರು ಪಂಜಾಬ್‌ನಲ್ಲಿ ಬದಲಾವಣೆ ಬಯಸಿರುವುದು ಸ್ಪಷ್ಟವಾಗುತ್ತದೆ. ದೆಹಲಿಯಲ್ಲಿ ಮಾಡಿದ ಕೆಲಸಗಳು ಅವರಿಗೆ ಅಷ್ಟು ಮತಗಳನ್ನು ತಂದುಕೊಟ್ಟಿದೆ ಎಂದರು.