ಮುಂಬೈ : ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಕೇಂದ್ರದ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ (National Monetisation Pipeline) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಎಂದಿಗೂ ಕಾರ್ಯತಂತ್ರದ ಆಸ್ತಿಯನ್ನು ಮಾರಾಟ ಮಾಡಿಲ್ಲ. ಮಾನದಂಡಗಳ ಆಧಾರದ ಮೇಲೆ ನಾವು ಸ್ವತ್ತುಗಳನ್ನು ಆರಿಸಿದ್ದರಿಂದ ಹಣಗಳಿಕೆಯಲ್ಲಿ ಯಾವುದೇ ಏಕಸ್ವಾಮ್ಯ ಇಟ್ಟಿರಲಿಲ್ಲ ಎಂದು ಈಗಿನ ಎನ್ಎಂಪಿ ವಿರುದ್ಧ ಹರಿಹಾಯ್ದರು.
ಮುಂದುವರೆದು ಮಾತನಾಡಿದ ಅವರು, ಹಣಗಳಿಕೆಯ ಪ್ರಕ್ರಿಯೆ ವಲಯದಲ್ಲಿ ಏಕಸ್ವಾಮ್ಯ ಅಥವಾ ದ್ವಂದ್ವಗಳನ್ನು ಸೃಷ್ಟಿಸದಂತೆ ನೋಡಿಕೊಳ್ಳಲು ಬಿಡ್ (ಐಟಿಬಿ) ಆಹ್ವಾನದಲ್ಲಿ ನಿಬಂಧನೆಗಳನ್ನು ಸೇರಿಸಲಾಗಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬಂದರುಗಳು, ವಿಮಾನ ನಿಲ್ದಾಣಗಳು, ದೂರಸಂಪರ್ಕ ಮತ್ತು ವಿದ್ಯುತ್ ವಲಯಗಳಲ್ಲಿ ಏಕಸ್ವಾಮ್ಯಗಳು ಹೆಚ್ಚಾಗುವುದನ್ನು ತಡೆಯಲು ಯಾವ ನಿಬಂಧನೆಗಳನ್ನು ಸೇರಿಸಲಾಗಿದೆ? ಮೋದಿ ಸರ್ಕಾರದ ಯೋಜನೆ ಎಂದರೆ ಹಗಲು ದರೋಡೆ ಎಂದು ಹರಿಹಾಯ್ದರು.
ಮೋದಿ ಸರ್ಕಾರಕ್ಕೆ 20 ಪ್ರಶ್ನೆಗಳನ್ನು ಕೇಳಿದ ಅವರು, ಕೇಂದ್ರವು ಮಾರಾಟ ಮಾಡಲು ಯೋಜಿಸಿರುವ ಆಸ್ತಿಗಳಿಂದ ಪ್ರಸ್ತುತ ಆದಾಯವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಕೊಂಕಣ ರೈಲ್ವೆ ಮತ್ತು ದೆಹಲಿ ಮುಂಬೈ ಸರಕು ಕಾರಿಡಾರ್ ಅನ್ನು ಸಹ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನು ಚರ್ಚೆಗಳು ಮತ್ತು ಸಮಾಲೋಚನೆಗಳಿಲ್ಲದೆ ಹಾಗೇ ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೋತ್ತರ ಇಲ್ಲದೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಒಂದು ಅವಧಿಯ ನಂತರ ಸರ್ಕಾರಕ್ಕೆ ಮರಳಿ ಬರುವ ಸ್ವತ್ತುಗಳ ಮೌಲ್ಯವನ್ನು ಬಹಿರಂಗಪಡಿಸಬೇಕು. ರಾಷ್ಟ್ರೀಯ ನಗದೀಕರಣದ ಪೈಪ್‌ಲೈನ್‌ನ ಉದ್ದೇಶಗಳೇನು? ಅದು ನಾಲ್ಕು ವರ್ಷಗಳ ಅವಧಿಯಲ್ಲಿ ಆದಾಯವನ್ನು ಹೆಚ್ಚಿಸುವ ಏಕೈಕ ಉದ್ದೇಶವೇ ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಸ್ವತ್ತುಗಳನ್ನು ಮಾರಾಟ ಮಾಡುವ ಅಪಾಯದ ವಿರುದ್ಧ ಜನರು ಧ್ವನಿ ಎತ್ತಬೇಕು ಎಂದ ಅವರನ್ನು ಸರ್ಕಾರವನ್ನು ಕಾನೂನು ಬದ್ಧವಾಗಿ ಎದುರಿಸಲು ಕಾಂಗ್ರೆಸ್ ಯೋಜಿಸುತ್ತಿದೆಯೇ ಎಂದು ಪ್ರಶ್ನಿಸಿದಾಗ ಯಾರಾದರೂ ಸಹ ಅದಕ್ಕೆ ಸವಾಲಾಕುತ್ತಾರೆ. ಕಾಂಗ್ರೆಸ್ ಜನತಾ ನ್ಯಾಯಾಲಯಕ್ಕೆ ಆದ್ಯತೆ ನೀಡುತ್ತದೆ ಮತ್ತು ನಾವು ಅಪಾಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತೇವೆ ಎಂದರು.