ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಅಸ್ಸೋಂ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ತನ್ನ ಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸುವ ಉದ್ದೇಶದಿಂದ ಸ್ಟಾರ್ ಕ್ಯಾಂಪೇನರ್ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಜಿ -23 ನಾಯಕರನ್ನು ಸೇರಿಸಿಕೊಂಡಿಲ್ಲ. ಈ ಕುರಿತು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಜಿ -23 ನಾಯಕರನ್ನು ಸೇರಿಸಿಕೊಳ್ಳುವುದು ಅಥವಾ ಬಿಡುವುದು ಹೈಕಮಾಂಡ್‌ಗೆ ಬಿಟ್ಟದ್ದು, ಈಗಾಗಲೇ ಸ್ಟಾರ್ ಕ್ಯಾಂಪೇನರ್‌ಗಳ ಪಟ್ಟಿಯಲ್ಲಿ 30 ನಾಯಕರ ಹೆಸರನ್ನು ಘೋಷಿಸಲಾಗಿದೆ. ಅವರ ಪ್ರಚಾರದಿಂದಲೇ ಚುನಾವಣೆ ಗೆಲ್ಲಬಹುದು ಎಂದು ಭಾವಿಸಲಾಗಿದೆ. ಇದು ಒಳ್ಳೆಯ ವಿಚಾರ, ಇತರ ನಾಯಕರ ಅವಶ್ಯಕತೆ ಏನಿಲ್ಲಾ ಎಂದು ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸ್ಟಾರ್ ಪ್ರಚಾರಕರ ಕಾಂಗ್ರೆಸ್ ಪಟ್ಟಿಯಲ್ಲಿ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್ ಮತ್ತು ಮನೀಶ್ ತಿವಾರಿ ಸೇರಿದಂತೆ ಪ್ರಮುಖ ಜಿ -23 ಸದಸ್ಯರನ್ನು ಸೇರಿಸಲಾಗಿಲ್ಲ. ಉಳಿದಂತೆ ಕ್ಯಾಂಪೇನರ್ ಲಿಸ್ಟ್ ನಲ್ಲಿ ಪ್ರಮುಖವಾಗಿ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಚಿನ್ ಪೈಲೆಟ್, ನವಜೋತ್ ಸಿಂಗ್ ಸಿಧು, ಅಭಿಜಿತ್ ಮುಖರ್ಜಿ, ಮೊಹಮ್ಮದ್ ಅಜರುದ್ದೀನ್, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಬಿ.ಕೆ.ಹರಿಪ್ರಸಾದ್ ಹೆಸರು ಇದೆ.
ಇನ್ನು ಪಶ್ಚಿಮ ಬಂಗಾಳ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದೆ.