ಹೈದರಾಬಾದ್: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ಅಭೂತಪೂರ್ವ ಗೆಲುವು, ಕೈ ಹಕಮಾಂಡ್ಗೆ ಭರ್ಜರಿ ಬೂಸ್ಟ್ ನೀಡಿದೆ. ಹೀಗಾಗಿ ಮುಂಬರುವ ಚುನಾವಣೆಗಳನ್ನು ಎದುರಿಸಲು ಕಾಂಗ್ರೆಸ್ ರಣೋತ್ಸಾಹದಿಂದ ಮುನ್ನುಗ್ಗುತ್ತಿದೆ. ಯಾವುದೇ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿ ಮುನ್ನಡೆಯುವ ಛಾತಿಯಲ್ಲಿದೆ.
ಕರ್ನಾಟಕ ಗೆಲುವಿನ ಹುಮ್ಮಸ್ಸು, ತೆಲಂಗಾಣದಲ್ಲೂ ಪಕ್ಷವನ್ನು ಗೆಲ್ಲಿಸುವ ಗಟ್ಟಿ ವಿಶ್ವಾಸವನ್ನು ಪಕ್ಷದ ನಾಯಕರಲ್ಲಿ ಬಲಗೊಳಿಸಿದೆ. ಹೀಗಾಗಿ ಕಾಂಗ್ರೆಸ್ ಮತ್ತಷ್ಟು ಸಮರ್ಥವಾಗಿ ಮುನ್ನಡೆಯಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಚಾರ ಹಾಗೂ ಅನುಸರಿಸಬೇಕಾದ ಕಾರ್ಯತಂತ್ರಗಳ ಜವಾಬ್ದಾರಿಯನ್ನು ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈಗಾಗಲೇ ಕರ್ನಾಟಕದ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ತೆಲಂಗಾಣ ಚುನಾವಣಾ ಉಸ್ತುವಾರಿಯನ್ನು ವಹಿಸಲಾಗಿದೆ. ಇದರ ಜೊತೆಗೆ ತೆಲಂಗಾಣದಲ್ಲಿ ಪಕ್ಷದದ ಬಲವರ್ದನೆಗೆ ಎಐಸಿಸಿ ಕಾರ್ಯದರ್ಶಿಗಳು ತಮ್ಮ ಕಸರತ್ತನ್ನು ಮುಂದುವರೆಸಿದ್ದಾರೆ. ಇನ್ನು ಕಾಂಗ್ರೆಸ್ ನಾಯಕತ್ವದ ಪರವಾಗಿ ಪ್ರಿಯಾಂಕಾ ಗಾಂಧಿ ಮತ್ತು ಡಿ ಕೆ ಶಿವಕುಮಾರ್, ತೆಲಂಗಾಣದಲ್ಲಿ ಪಕ್ಷದ ಗೆಲುವಿಗೆ ಬೇಕಾದ ಎಲ್ಲ ಕಾರ್ಯತಂತ್ರ, ರಣತಂತ್ರ ಹಾಗೂ ಪಕ್ಷದ ಬಲವರ್ದನೆಗೆ ಸಂಬಂಧಿಸಿದಂತೆ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಅದರಲ್ಲೂ ಪಕ್ಷದ ನಾಯಕರಲ್ಲಿ ಒಗ್ಗಟ್ಟು ಕಾಪಾಡುವುದು, ಎಲ್ಲರೂ ಒಗ್ಗೂಡಿ ಸೌಹಾರ್ದತೆಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳುವುದು, ಕಾಲಕಾಲಕ್ಕೆ ತಂತ್ರಗಳಲ್ಲಿ ಬದಲಾವಣೆ ಮಾಡುವುದು ಹೀಗೆ ಗೆಲುವಿಗೆ ಏನೆಲ್ಲ ಮಾಡಬೇಕೋ ಅದನ್ನು ಯಶಸ್ವಿಯಾಗಿ ಮಾಡಲು ಈ ಇಬ್ಬರು ನಾಯಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕಾಂಗ್ರೆಸ್ನ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇಲ್ಲೂ ಚುನಾವಣಾ ನಿಪುಣ ಸುನೀಲ್ ಕನುಗೋಲು ಪಾತ್ರ: ಚುನಾವಣಾ ತಂತ್ರಜ್ಞ ಸುನಿಲ್ ಕನುಗೋಲು ನೀಡುವ ಸಮೀಕ್ಷಾ ವರದಿ ಅನ್ವಯವೇ ಕಾಂಗ್ರೆಸ್ ರಣತಂತ್ರ ರೂಪುಗೊಳ್ಳಲಿದೆ ಎಂದು ತಿಳಿದು ಬಂದಿದೆ. ತೆಲಂಗಾಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠೆ ಸೋನಿಯಾ, ರಾಹುಲ್, ಖರ್ಗೆ ಜತೆ ಸಭೆ ನಡೆಸಿದರೂ, ಎಲ್ಲ ಪ್ರಮುಖ ನಿರ್ಣಯಗಳನ್ನು ಪ್ರಿಯಾಂಕಾ ಗಾಂಧಿ ಹಾಗೂ ಡಿ ಕೆ ಶಿವಕುಮಾರ್ ಅವರಿಬ್ಬರೇ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ಕೆಲ ಸಮಸ್ಯೆಗಳು ಇದ್ದೇ ಇವೆ: ತೆಲಂಗಾಣದ ಜನರಲ್ಲಿ ಬಿಎಸ್ಆರ್ ಪಕ್ಷದ ಬಗ್ಗೆ ಆಂತರಿಕ ಸಿಟ್ಟು ಇದೆ ಎನ್ನಲಾಗಿದೆ. ಇದು ತಮಗೆ ಅನುಕೂಲ ಆಗಲಿದೆ ಎಂಬುದು ಕಾಂಗ್ರೆಸ್ನ ಲೆಕ್ಕಾಚಾರ. ಆದರೂ 35ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ ಎನ್ನಲಾಗಿದೆ. ನಾಯಕರ ನಡುವಿನ ಭಿನ್ನಾಭಿಪ್ರಾಯ, ಸಂಪನ್ಮೂಲದ ಕೊರತೆ ಹೀಗೆ ಹಲವು ಅಂಶಗಳು ಕಾಂಗ್ರೆಸ್ ಓಗಕ್ಕೆ ತಡೆಯೊಡ್ಡಬಹುದು ಎಂಬ ಮಾತುಗಳಿವೆ.
ಬೇರೆ ಪಕ್ಷಗಳಿಂದ ಪ್ರಬಲ ನಾಯಕರು ಬರುವ ನಿರೀಕ್ಷೆಯಿದ್ದರೂ ಖಮ್ಮಂ ಜಿಲ್ಲೆಯಿಂದ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಹಾಗೂ ಮಹಬೂಬ್‌ನಗರ ಜಿಲ್ಲೆಯಿಂದ ಜೂಪಲ್ಲಿ ಕೃಷ್ಣರಾವ್ ಅವರನ್ನು ಹೊರತುಪಡಿಸಿದರೆ ಬೇರೆ ಜಿಲ್ಲೆಗಳಿಂದ ಅಂತಹ ಯಾವುದೇ ದೊಡ್ಡ ನಾಯಕರು ಕಾಂಗ್ರೆಸ್ಗೆ ಬಂದಿಲ್ಲ.
ರಂಗಾ ರೆಡ್ಡಿ ಜಿಲ್ಲೆಯಲ್ಲಿ ಮಾಜಿ ಸಚಿವರೊಬ್ಬರ ಕುಟುಂಬ ಕಾಂಗ್ರೆಸ್ ಪಕ್ಷವನ್ನು ಸೇರಲಿದೆ ಎಂಬ ವದಂತಿಗಳಿವೆಯಾದರೂ ಅದಿನ್ನೂ ಖಚಿತವಾಗಿಲ್ಲ. ಈ ಪ್ರಯತ್ನಕ್ಕೆ ಬಿಎಸ್ಆರ್ ಪಕ್ಷದ ವರಿಷ್ಠರು ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೂ ಮಾಜಿ ಸಚಿವರ ಬಗ್ಗೆ ಕಾಂಗ್ರೆಸ್ ನಾಯಕರು ಇನ್ನೂ ಆಶಾಭಾವನೆ ಇಟ್ಟುಕೊಂಡಿದ್ದಾರೆ ಅನ್ನುತ್ತಿವೆ ಕಾಂಗ್ರೆಸ್ ಮೂಲಗಳು. ಹೈದರಾಬಾದ್, ರಂಗಾರೆಡ್ಡಿ, ಮೇದಕ್, ಅದಿಲಾಬಾದ್ ಮತ್ತು ಇತರ ಜಿಲ್ಲೆಗಳಲ್ಲಿ ಪಕ್ಷ ಪ್ರಬಲ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.
ಇದನ್ನು ಓದಿ:ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಮಾನತು.. ಸಭೆ ಕರೆದ ಸೋನಿಯಾ ಗಾಂಧಿ