ಲಖನೌ: ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು ರಾಜ್ಯದಲ್ಲಿ ಮೂರನೇ ಬಾರಿಗೆ ವಿಸ್ತರಿಸಿದ ನಂತರ ಉತ್ತರ ಪ್ರದೇಶ ಸರ್ಕಾರ ಸರ್ವಾಧಿಕಾರತ್ವದಿಂದ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ನೌಕರರ ಪ್ರಜಾಪ್ರಭುತ್ವ ಹಕ್ಕುಗಳನ್ನು ಹತ್ತಿಕ್ಕುವ ಉದ್ದೇಶದಿಂದ ಯೋಗಿ ಸರ್ಕಾರ ಈ ನೀತಿಗಳನ್ನು ಅನುಸರಿಸುತ್ತಿದೆ ಎಂದಿದ್ದಾರೆ.
ಯುಪಿ ಸರ್ಕಾರ ಸರ್ವಾಧಿಕಾರವನ್ನು ಅನುಸರಿಸುತ್ತಿದೆ. ರಾಜ್ಯದ ಉದ್ಯೋಗಿ ಸಂಸ್ಥೆಗಳ ಹಲವಾರು ಬೇಡಿಕೆಗಳು ಬಾಕಿ ಉಳಿದಿವೆ. ಅವರೊಂದಿಗೆ ಕುಳಿತು ಮಾತನಾಡುವ ಬದಲು ಸರ್ಕಾರ ಮೂರನೇ ಬಾರಿಗೆ ಎಸ್ಮಾವನ್ನು ರಾಜ್ಯದಲ್ಲಿ ವಿಸ್ತರಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆ ಸರ್ಕಾರದ ನೀತಿಗಳು ನೌಕರರ ಪ್ರಜಾಪ್ರಭುತ್ವ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಗುರುವಾರ ರಾಜ್ಯದಲ್ಲಿ ಎಸ್ಮಾವನ್ನು ವಿಸ್ತರಿಸಿದ್ದು, ಸಾರ್ವಜನಿಕ ಸೇವೆಗಳು, ನಿಗಮಗಳು ಮತ್ತು ಸ್ಥಳೀಯ ಅಧಿಕಾರಿಗಳ ಮುಷ್ಕರಗಳನ್ನು ಆರು ತಿಂಗಳ ಅವಧಿಗೆ ನಿಷೇಧಿಸಿತ್ತು. ಈ ಕುರಿತು ಅಧಿಸೂಚನೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಈ ಕಾಯ್ದೆಯು ವಾರಂಟ್ ಇಲ್ಲದೇ, ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯಾರನ್ನೂ ಬೇಕಾದರೂ ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ.