ನವದೆಹಲಿ: ಕೊರೊನಾ ವೈರಸ್ನಿಂದ ದೇಶದಲ್ಲಿ ಸಾವನ್ನಪ್ಪಿರುವ ಪ್ರತಿಯೊಬ್ಬರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರಧನವನ್ನು ಆಯಾ ರಾಜ್ಯಗಳು ನೀಡಲಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಈ ವಿಚಾರವಾಗಿ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇದೊಂದು 'ಹಾಸ್ಯಾಸ್ಪದ ಪರಿಹಾರ' ಎಂದಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, 'ಕೋವಿಡ್ನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ 50 ಸಾವಿರ ರೂ. ಪರಿಹಾರ ನೀಡುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಆದರೆ ಇದು ಹಾಸ್ಯಾಸ್ಪದವಾಗಿದೆ. ಜನರಿಗೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿಲ್ಲ' ಎಂದರು. ಇದೇ ವೇಳೆ ಕೋವಿಡ್ನಿಂದ ಪ್ರಾಣ ಕಳೆದುಕೊಂಡಿರುವ ಪ್ರತಿ ಕುಟುಂಬಕ್ಕೂ 5 ಲಕ್ಷ ರೂ. ಪರಿಹಾರ ಮೊತ್ತ ನೀಡುವಂತೆ ಅವರು ಒತ್ತಾಯಿಸಿದರು.
ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದರೆ ಒಟ್ಟು ಹಣ 22,000 ಕೋಟಿ ರೂ. ಆಗಲಿದ್ದು, ಕೇಂದ್ರ ಸರ್ಕಾರ ಪ್ರತಿ ವರ್ಷ ಪೆಟ್ರೋಲ್-ಡೀಸೆಲ್ ತೆರಿಗೆಯಿಂದ ಗಳಿಕೆ ಮಾಡುವ ಶೇ. 5ರಷ್ಟಾಗುತ್ತದೆ ಎಂದಿದ್ದಾರೆ. ಹಾಗಾಗಿ, ಪರಿಹಾರಧನವನ್ನು ಕೇಂದ್ರ ಗೃಹ ಸಚಿವಾಲಯ ತಕ್ಷಣವೇ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಆಯಾ ರಾಜ್ಯಗಳು ಕೊರೊನಾದಿಂದ ಸಾವನ್ನಪ್ಪಿರುವ ಕುಟುಂಬಗಳಿಗೆ ಪರಿಹಾರ ನೀಡಲಿವೆ ಎಂದು ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತ್ತು. ಭಾರತದಲ್ಲಿ ಇಲ್ಲಿವರೆಗೆ 4.45 ಲಕ್ಷ ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ.