ನವದೆಹಲಿ: ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್ ಮತ್ತು ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಇತ್ತೀಚೆಗೆ ಜಾರಿಯಾದ ಕೃಷಿ ಕಾನೂನು ಹಿಂಪಡೆಯಲು ಕೋರಿದ್ದಾರೆ.
ನೂತನ ಕಾನೂನುಗಳು ರೈತ ವಿರೋಧಿಯಾಗಿದ್ದು, ಕೃಷಿಕರಿಗೆ ಭಾರಿ ನಷ್ಟವನ್ನು ತಂದೊಡ್ಡಲಿವೆ. ಶಾಸನಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಒಂದು ತಿಂಗಳಿನಿಂದ ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರೊಂದಿಗೆ ಪ್ರತಿಪಕ್ಷಗಳು ನಿಂತಿವೆ ಎಂದು ರಾಷ್ಟ್ರಪತಿಗಳ ಗಮನಕ್ಕೆ ತಂದರು.
ಇದನ್ನೂ ಓದಿ: ಅಯೋಧ್ಯೆ ಮಸೀದಿಯು ವಕ್ಫ್ ಕಾಯ್ದೆಗೆ ವಿರುದ್ಧವಾಗಿದೆ: ಜಫರ್ಯಾಬ್ ಜಿಲಾನಿ
ರಾಷ್ಟ್ರಪತಿ ಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅಸಮರ್ಥತೆ ಮತ್ತು ಕೃಷಿ ವ್ಯವಸ್ಥೆ ನಾಶಪಡಿಸುವುದಕ್ಕಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ದೂರಿದರು.
ಕಾನೂನುಗಳನ್ನು ರದ್ದುಪಡಿಸುವವರೆಗೂ ಈ ರೈತರು ಮನೆಗೆ ಹಿಂದಿರುಗುವುದಿಲ್ಲ ಎಂಬುದನ್ನು ನಾನು ಪ್ರಧಾನಿಗೆ ಹೇಳಲು ಬಯಸುತ್ತೇನೆ. ಸಂಸತ್ತಿನ ಜಂಟಿ ಅಧಿವೇಶನವನ್ನು ಸರ್ಕಾರ ಕರೆಯಬೇಕು ಮತ್ತು ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಭಾರತ ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದೆ. ಬಂಧನಕ್ಕೆ ಒಳಪಡಿಸುವುದು, ಹೊಡೆಯುವುದು ಈ ಸರ್ಕಾರಕ್ಕೆ ಒಂದು ರೂಢಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎಂದು ಟೀಕಿಸಿದರು.