ನವದೆಹಲಿ: ಮುಂಬರುವ 2024ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಎರಡು ಹೊಸ ತಂಡಗಳನ್ನು ರಚನೆ ಮಾಡಿದೆ. ರಾಜಕೀಯ ವ್ಯವಹಾರಗಳ ಗುಂಪು ಮತ್ತು ಟಾಸ್ಕ್ ಫೋರ್ಸ್ ರಚಿಸಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶಿಸಿದ್ದಾರೆ.
ಕಾಂಗ್ರೆಸ್ ಪುನಶ್ಚೇತನಕ್ಕಾಗಿ ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಚಿಂತನಾ ಶಿಬಿರ ನಡೆಸಲಾಗಿತ್ತು. ಈ ವೇಳೆ ರಾಜಕೀಯ ಸಲಹೆಗಳನ್ನು ಕೊಡಲು ರಾಜಕೀಯ ವ್ಯವಹಾರಗಳ ಗುಂಪು ರಚಿಸುವುದಾಗಿ ಸೋನಿಯಾ ಘೋಷಿಸಿದ್ದರು. ಅಲ್ಲದೇ, ಪಕ್ಷದ ಸಂಘಟನೆ, ವಿವಿಧ ಹುದ್ದೆಗಳಿಗೆ ನೇಮಕಾತಿ ನಿಯಮ, ಸಂವಹನ ಮತ್ತು ಪ್ರಚಾರ, ಹಣಕಾಸು ಹಾಗೂ ಚುನಾವಣಾ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳಿಗಾಗಿ ಟಾಸ್ಕ್ಫೋರ್ಸ್ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ಅಂತೆಯೇ ಇದಾದ 10 ದಿನಗಳಲ್ಲೇ ಇವುಗಳನ್ನು ಅವರು ಅನುಷ್ಠಾನಕ್ಕೆ ತಂದಿದ್ದಾರೆ.
ಇಬ್ಬರು ರೆಬಲ್ಗಳಿಗೆ ಸ್ಥಾನ: ಪಕ್ಷದ ನಾಯಕತ್ವದ ವಿರುದ್ಧ ಭಿನ್ನ ಧ್ವನಿ ಎತ್ತಿದ್ದ ಇಬ್ಬರು ನಾಯಕರಿಗೂ ರಾಜಕೀಯ ವ್ಯವಹಾರಗಳ ಗುಂಪಿನಲ್ಲಿ ಸ್ಥಾನ ನೀಡಲಾಗಿದೆ. ಭಿನ್ನಮತದ ಗುಂಪಿನ (ಜಿ-23) ಪ್ರಮುಖರಾದ ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಸ್ಥಾನ ಪಡೆದಿದ್ದು, ಈ ಮೂಲಕ ಪಕ್ಷದಲ್ಲಿನ ಭಿನ್ನಮತ ಶಮನಕ್ಕೆ ಸೋನಿಯಾ ಪ್ರಯತ್ನಿಸುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅಂದಹಾಗೆ, ಈ ರಾಜಕೀಯ ವ್ಯವಹಾರಗಳ ಗುಂಪಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ದಿಗ್ವಿಜಯ್ ಸಿಂಗ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್ ಮತ್ತು ಜಿತೇಂದ್ರ ಸಿಂಗ್ ಸೇರಿದಂತೆ ಒಟ್ಟು ಎಂಟು ಸದಸ್ಯರಿದ್ದಾರೆ.
ಅದೇ ರೀತಿಯಾಗಿ ಟಾಸ್ಕ್ಫೋರ್ಸ್ನಲ್ಲಿ ಪಿ.ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ಅಜಯ್ ಮಕೇನ್, ಪ್ರಿಯಾಂಕಾ ಗಾಂಧಿ, ರಂದೀಪ್ ಸಿಂಗ್ ಸುರ್ಜೇವಾಲಾ ಮತ್ತು ಸುನೀಲ್ ಕಾನುಗೋಲು ಇದ್ದು, ಪ್ರತಿಯೊಬ್ಬ ನಾಯಕರಿಗೂ ನಿರ್ದಿಷ್ಟ ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ಪಟ್ಟಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನ