ನವದೆಹಲಿ: ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವ ಮತ್ತು ಪಟ್ಟಿ ಮಾಡುವ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ ಫೆಡರಲ್ ರಚನೆಯ ಮೇಲೆ ಬಿಜೆಪಿ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುಲು ಪ್ರಯತ್ನಿಸುತ್ತಿದೆ. ಸುಳ್ಳು ಮಾಹಿತಿ ಸೃಷ್ಟಿಸುವ ಮೂಲಕ ದೇಶದ ಜನರನ್ನು ಮೋಸಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
2018 ರ ಆಗಸ್ಟ್ 11 ರಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲೂ ಸಮ್ಮತಿ ನೀಡಲಾಗಿತ್ತು. ಆದರೆ ಸಾಂವಿಧಾನಿಕವಾಗಿ ಮಸೂದೆ ಅಂಗೀಕಾರದ ಸಮಯದಲ್ಲಿ ಬಿಜೆಪಿ ಅಜಾಗರೂಕತೆ ತೋರಿಸಿದ್ದು, ರಾಜ್ಯಗಳು ಒಬಿಸಿ ಪಟ್ಟಿಯನ್ನು ಸಿದ್ಧಪಡಿಸಲು ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿಲ್ಲ. ಈ ಕುರಿತು ಗೊಂದಲಗಳಿವೆ ಎಂದು ಅವರು ಹೇಳಿದರು.
ಇನ್ನು ರಾಜ್ಯಗಳು ತಮ್ಮದೇ ಆದ ಒಬಿಸಿ ಪಟ್ಟಿಗಳನ್ನು ಹೊಂದಿರುವುದಿಲ್ಲ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಒಂದು ಪಟ್ಟಿ ಇರುತ್ತದೆ ಎಂದು ರಾಷ್ಟ್ರೀಯ ಆಯೋಗದ ರಚನೆಯನ್ನು ಸುಪ್ರೀಂಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಅರ್ಥೈಸಿಕೊಂಡಿದೆ. ಹೀಗಾಗಿ ನೀವು ಮೊದಲೇ ಈ ಕುರಿತು ಸ್ಪಷ್ಟೀಕರಣ ನೀಡಬೇಕಿತ್ತು ಎಂದು ಕೇಂದ್ರದ ನಡೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.