ನವದೆಹಲಿ : ರಷ್ಯಾ-ಉಕ್ರೇನ್ ನಡುವಿನ ಗಂಭೀರ ಯುದ್ಧದ ಸವಾಲುಗಳ ಹೊರತಾಗಿಯೂ ಸುಮಾರು 22,500 ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿರುವುದನ್ನು ಖಚಿತಪಡಿಸುತ್ತೇನೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಕಲಾಪದಲ್ಲಿ ಮಾತನಾಡಿದ ಸಚಿವರು, ಎರಡೂ ದೇಶಗಳ ನಡುವಿನ ಸಂಘರ್ಷದಿಂದ 20,000ಕ್ಕೂ ಹೆಚ್ಚು ಭಾರತೀಯ ಸಮುದಾಯವರು ನೇರ ಅಪಾಯಕ್ಕೆ ಸಿಲುಕಿದ್ದಾರೆ ಎಂಬುದನ್ನು ಅರಿಯಲಾಗಿತ್ತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿ ನಮ್ಮ ನಾಗರಿಕರನ್ನು ರಕ್ಷಿಸುವುದು ಹಾಗೂ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳುವುದಕ್ಕೆ ಒತ್ತು ನೀಡಲಾಗಿತ್ತು.
ಈ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಸರ್ಕಾರ ಒಳಗೊಂಡಿತ್ತಲ್ಲದೆ, ಪ್ರಧಾನಮಂತ್ರಿ ಸ್ವತಃ ಪ್ರತಿದಿನವೂ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿದ್ದರು. ವಿದೇಶಾಂಗ ಸಚಿವಾಲಯದಲ್ಲಿ 24/7 ಆಧಾರದ ಮೇಲೆ ಸ್ಥಳಾಂತರಿಸುವ ಕಾರ್ಯದ ಮೇಲ್ವಿಚಾರಣೆ ಮಾಡಿದ್ದೇವೆ.
ಸೇನೆ, ಎನ್‌ಡಿಆರ್‌ಎಫ್, ಐಎಎಫ್, ಖಾಸಗಿ ಏರ್‌ಲೈನ್ಸ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಸಚಿವಾಲಯಗಳು ಮತ್ತು ಸಂಸ್ಥೆಗಳಿಂದ ನಾವು ಅತ್ಯುತ್ತಮ ಬೆಂಬಲವನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ವಾಯುದಾಳಿ, ಶೆಲ್ ದಾಳಿಗಳು ಸೇರಿದಂತೆ ಉಕ್ರೇನ್ ಮೇಲೆ ರಷ್ಯಾ ತೀವ್ರ ಕ್ರಮದ ಸಮಯದಲ್ಲಿ ಈ ರಕ್ಷಣಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಪ್ರಧಾನಿಯವರ ನಿರ್ದೇಶನದ ಮೇರೆಗೆ, ನಾವು ಆಪರೇಷನ್ ಗಂಗಾ ಮೂಲಕ ಅತ್ಯಂತ ಸವಾಲಿನ ಏರ್‌ಲಿಫ್ಟ್ ಕೆಲಸ ಮಾಡಿದ್ದೇವೆ.
ಎರಡು ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ 2022ರ ಫೆಬ್ರವರಿ 15ರಂದೇ ಉಕ್ರೇನ್‌ನಲ್ಲಿ ಅನಿವಾರ್ಯವಲ್ಲದ ಚಟುವಟಿಕೆಗಳನ್ನು ಕೈಗೊಳ್ಳದಂತೆ ಹಾಗೂ ಭಾರತದಲ್ಲಿದ್ದವರು ಉಕ್ರೇನ್‌ಗೆ ಪ್ರಯಾಣಿಸದಂತೆ ರಾಯಭಾರಿ ಕಚೇರಿ ಸೂಚನೆ ನೀಡಲಾಗಿತ್ತು.
ರಷ್ಯಾದ ಗಡಿಯಲ್ಲಿರುವ ಪೂರ್ವ ಉಕ್ರೇನ್‌ನ ವಿಶ್ವವಿದ್ಯಾನಿಲಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಈ ಪ್ರದೇಶ ಯುದ್ಧದ ಕೇಂದ್ರಬಿಂದುವಾಗಿದೆ. ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.
ಕೇರಳ, ಯುಪಿ, ಹರಿಯಾಣ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನದಿಂದ ತಲಾ 1000 ವಿದ್ಯಾರ್ಥಿಗಳನ್ನು ಇಲ್ಲಿಂದ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಸಚಿವ ಜೈಶಂಕರ್ ಕಲಾಪದಲ್ಲಿ ಹೇಳಿದರು.
ಇದನ್ನೂ ಓದಿ: ಖಂಡಿತವಾಗಿ ನಾವಿರಬೇಕು..ನಿಮ್ಮ ನೆರವು ಬೇಕು..ಚರ್ಚಿಲ್ ಉಲ್ಲೇಖಿಸಿ ಬ್ರಿಟನ್ ಸಹಾಯ ಕೇಳಿದ ಝೆಲೆನ್‌ಸ್ಕಿ