ಕೋಲ್ಕತ್ತಾ: ಪ.ಬಂಗಾಳದ ದುರ್ಗಾಪುರ ಜಿಲ್ಲೆಯ ಯುವಕರಲ್ಲಿ ಮಾದಕ ವ್ಯಸನದ ವಿಚಿತ್ರ ಪ್ರವೃತ್ತಿ ಕಂಡು ಬರುತ್ತಿದೆ. ಇಲ್ಲಿ ಯುವಕರು ನಶೆ ಏರಿಸಿಕೊಳ್ಳಲು ಕಾಂಡೋಮ್ ಬಳಸುತ್ತಿದ್ದಾರೆ. ಇದೊಂದು ರೀತಿಯ ಆಘಾತಕಾರಿ ಮಾದಕ ವ್ಯಸನ.
ಇದು ಇಲ್ಲಿನ ಅಂಗಡಿಗಳಲ್ಲಿ ಕಾಂಡೋಮ್‌ಗಳ ಕೊರತೆ ಉದ್ಭವಿಸುವಷ್ಟು ಅತಿರೇಕಕ್ಕೆ ಹೋಗಿದೆ. ಡ್ರಗ್ಸ್‌ಗಾಗಿ ಯುವಕರಲ್ಲಿ ಫ್ಲೇವರ್ಡ್(ಸುವಾಸನೆ ಬೀರುವ) ಕಾಂಡೋಮ್‌ಗಳ ಖರೀದಿ ಭರಾಟೆ ಸಾರ್ವಜನಿಕರನ್ನು ಚಿಂತೆಗೀಡು ಮಾಡುತ್ತಿದೆ. ದುರ್ಗಾಪುರ ಸಿಟಿ ಸೆಂಟರ್, ಬಿಧಾನ್ ನಗರ, ಬೆಣಚಿಟಿ, ಮುಚಿಪಾರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದೀಗ ಸುವಾಸನೆ ಭರಿತ ಕಾಂಡೋಮ್‌ಗಳೇ ಸಿಗುತ್ತಿಲ್ಲವಂತೆ.
ಮಾಧ್ಯಮ ವರದಿಗಳ ಪ್ರಕಾರ, ಮೊದಮೊದಲು ಕಾಂಡೋಮ್‌ಗಳಿಗೆ ಈ ಪರಿಯ ಬೇಡಿಕೆ ಅಂಗಡಿ ಮಾಲೀಕರಿಗೂ ಅರ್ಥವಾಗಿರಲಿಲ್ಲ. ಒಮ್ಮೆ ಚಿಕ್ಕ ವಯಸ್ಸಿನ ಹುಡುಗ ಕಾಂಡೋಮ್ ಖರೀದಿಸಲು ಅಂಗಡಿಗೆ ಬಂದಿದ್ದ. ಆತನಿಗೆ ಇಷ್ಟು ದೊಡ್ಡ ಸಂಖ್ಯೆಯ ಕಾಂಡೋಮ್ಗಳೇಕೆ ಎಂದು ತಕ್ಷಣಕ್ಕೆ ಅಂಗಡಿ ಮಾಲೀಕನಿಗೆ ತಿಳಿಯಲಿಲ್ಲ. ಹೀಗಾಗಿ ಆತ ಹುಡುಗನನ್ನು ಪ್ರಶ್ನಿಸಿದ್ದು, ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಆತ ಹೇಳಿದ್ದೇನು ಗೊತ್ತೇ?.
"ಹಬೆ ತೆಗೆದುಕೊಳ್ಳುವುದಕ್ಕೆ ನಾನು ಈ ಕಾಂಡೋಮ್‌ಗಳನ್ನು ಬಳಸುತ್ತೇನೆ. ನನಗೆ ಪರಿಚಯವಿರುವ ಅನೇಕ ಯುವಕರು ಇದನ್ನು ಡ್ರಗ್ಸ್ ಬದಲಿಗೆ ಬಳಸುತ್ತಿದ್ದಾರೆ" ಎಂದು ಆತ ಹೇಳಿದ್ದನಂತೆ. ಅಷ್ಟೇ ಅಲ್ಲ, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಕೂಡ ಈ ವಿಷಯದಲ್ಲಿ ಸಂಶೋಧನಾತ್ಮಕ ವರದಿಯೊಂದನ್ನು ಪ್ರಕಟಿಸಿದೆ. ಈ ಸಂಶೋಧನೆಯ ಪ್ರಕಾರ, ಕಾಂಡೋಮ್‌ಗಳು ಆರೊಮ್ಯಾಟಿಕ್ ಸಂಯುಕ್ತಗಳನ್ನು ಹೊಂದಿರುತ್ತವೆ. ಈ ಆರೊಮ್ಯಾಟಿಕ್ ಸಂಯುಕ್ತಗಳು ಕರಗಿದ ನಂತರ ಆಲ್ಕೋಹಾಲ್ ರೂಪುಗೊಳ್ಳುತ್ತದೆ. ಯಾರು ಬೇಕಾದರೂ ಅದಕ್ಕೆ ವ್ಯಸನಿಯಾಗಬಹುದಂತೆ.
ಕಾಂಡೋಮ್ ಕುದಿಸಿ ನೀರು ಕುಡಿಯುವುದು!: ಈ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆ ವರದಿಯು, ಕಾಂಡೋಮ್ ಅನ್ನು ಬಿಸಿಯಾದ ನೀರಿರುವ ತೆರೆದ ಪಾತ್ರೆಯಲ್ಲಿ ದೀರ್ಘಕಾಲ ಇರಿಸಿದರೆ ಅದರಲ್ಲಿರುವ ಆರೊಮ್ಯಾಟಿಕ್ ಸಂಯುಕ್ತಗಳು ಹೊರಬಂದು ನೀರಿನೊಂದಿಗೆ ಬೆರೆಯುತ್ತವೆ. ಬಳಿಕ ಈ ನೀರು ಒಂದು ರೀತಿಯ ಅಮಲು ನೀಡುತ್ತದೆ. ಯುವಕರು ಈ ನೀರಿನ ಹಬೆಯನ್ನು ಆಘ್ರಾಣಿಸುತ್ತಿದ್ದಾರೆ. ಆದರೆ, ಈ ನೀರನ್ನೂ ಕೆಲ ಯುವಕರು ಕುಡಿಯುವುದೂ ಉಂಟು ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.
ವಿಶ್ವಸನೀಯ ಮೂಲಗಳ ಪ್ರಕಾರ, ಕೈಗಾರಿಕಾ ಪ್ರದೇಶವಾಗಿರುವ ದುರ್ಗಾಪುರದಲ್ಲಿ ವಾಸಿಸುವ ಹೆಚ್ಚಿನ ವಿದ್ಯಾರ್ಥಿಗಳು ಸುವಾಸನೆಭರಿತ ಕಾಂಡೋಮ್‌ಗಳನ್ನು ಇಡೀ ರಾತ್ರಿ ಬಿಸಿ ನೀರಿನಲ್ಲಿ ಅದ್ದಿ ಮತ್ತು ಮರುದಿನ ಆ ಕಾಂಡೋಮ್ ತೊಳೆದ ನೀರು ಕುಡಿದು ಅಮಲೇರಿಸಿಕೊಳ್ತಾರಂತೆ. ಇದೇ ಕಾರಣಕ್ಕೆ ಔಷಧಿ ಅಂಗಡಿಗಳಲ್ಲಿ ಕಾಂಡೋಮ್‌ಗಳು ಕಡ್ಲೆಪುರಿಯಂತೆ ಬಿಕರಿಕೊಳ್ಳುತ್ತಿವೆ. ಇದನ್ನು ಖರೀದಿಸುವ ಗ್ರಾಹಕರು ಮುಖ್ಯವಾಗಿ ಯುವ ಮತ್ತು ಹದಿಹರೆಯದವರೇ ಆಗಿದ್ದಾರೆ. ಕೆಲವರು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ರೆ, ಇನ್ನೂ ಕೆಲವರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಇವರು ಎಲ್ಲಕ್ಕಿಂತ ಹೆಚ್ಚಾಗಿ ಅವಿವಾಹಿತರು.
ಇದನ್ನೂ ಓದಿ: ನಾವು ಇಲ್ಲಿ ಯಾರಿಗೂ ಬೋಧಿಸಲು ಬರುತ್ತಿಲ್ಲ; 'ಛತ್ರಿವಾಲಿ' ಚಿತ್ರದ ಬಗ್ಗೆ ಮಾಹಿತಿ ನೀಡಿದ ರಾಕುಲ್