ಚಂಡಿಗಢ: ಯೋಗ ಗುರು ಬಾಬಾ ರಾಮ್ದೇವ್ ಅವರ ಹೇಳಿಕೆ ದಿನೇದಿನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಚಂಡೀಗಢ ಜಿಲ್ಲಾ ವಕೀಲರ ಸಂಘದ ಮಾಜಿ ಮುಖ್ಯಸ್ಥ ರವೀಂದ್ರ ಸಿಂಗ್ ಬಾಸ್ಸಿ, ವಕೀಲ ವಿನೋದ್ ಕುಮಾರ್ ವರ್ಮಾ ಮೂಲಕ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ರಾಮ್ದೇವ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ರವೀಂದ್ರ ಸಿಂಗ್ ಬಾಸ್ಸಿ, ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯಿದೆ. ಈ ಸಮಯದಲ್ಲಿ ಬಾಬಾ ರಾಮ್ದೇವ್ ಅಲೋಪತಿ ವಿಧಾನದ ವಿರುದ್ಧ ಹೇಳಿಕೆ ನೀಡುವುದು ಸಮಂಜಸವಲ್ಲ. ವೈದ್ಯರು ತಮ್ಮ ಜೀವದ ಬಗ್ಗೆ ಕಾಳಜಿ ವಹಿಸದೇ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.
ಅಲೋಪತಿ ವೈದ್ಯರ ವಿರುದ್ಧ ಹೇಳಿಕೆ ಕೊಟ್ಟಿರುವ ಬಾಬಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತಮ್ಮ ಮೊದಲ ಹೇಳಿಕೆಗೆ ಸಂಬಂಧಿಸಿದಂತೆ ಅವರು ಆರೋಗ್ಯ ಸಚಿವರಿಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ. ಆ ನಂತರವೂ ಮತ್ತೆ ಮತ್ತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಮ್ದೇವ್ ತಮ್ಮ ಕಂಪನಿಯ ಉತ್ಪನ್ನ ಮಾರಾಟ ಮಾಡಬೇಕಾದರೆ ಮಾಧ್ಯಮಗೋಷ್ಟಿ ನಡೆಸಿ, ಕೊರೊನಾಗೆ ಔಷಧಿ ತಯಾರಿಸೋದ್ಹೇಗೆ ಅನ್ನೋದನ್ನು ಹೇಳಿಕೊಡುತ್ತಾರೆ. ಆದರೆ, ಅವರೇ ಹುಷಾರು ತಪ್ಪಿದಾಗ ಆಸ್ಪತ್ರೆಗೆ ದಾಖಲಾಗುತ್ತಾರೆ. ಇದು ಡೋಂಗಿ ಬಾಬಾನ ನಿಜಮುಖ ಎಂದು ಗುಡುಗಿದ್ದಾರೆ.