ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನದಿಂದ ಬೋರಿಸ್ ಜಾನ್ಸನ್ ಅವರನ್ನು ಸರಿಸಿ ಆ ಸ್ಥಾನ ಆಕ್ರಮಿಸುವುದು ಹಾಗೂ ಮುಂದಿನ ಬ್ರಿಟಿಷ್ ಪ್ರಧಾನ ಮಂತ್ರಿಯಾಗುವ ರಾಜಕೀಯ ಹಗ್ಗ-ಜಗ್ಗಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ಮಾಜಿ ಸಚಿವ ಹಾಗೂ ಬ್ರಿಟಿಷ್-ಭಾರತೀಯ ರಿಷಿ ಸುನಕ್ ಈಗಾಗಲೇ ರೇಸ್ನಲ್ಲಿದ್ದು, ಈಗ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಸಹ ಅತ್ಯುನ್ನತ ಹುದ್ದೆಯ ಸ್ಪರ್ಧೆಗಿಳಿದಿದ್ದು, ಬ್ರಿಟನ್ ರಾಜಕೀಯ ಮತ್ತಷ್ಟು ರೋಚಕವಾಗುತ್ತಿದೆ.
ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ ಸಚಿವಾಲಯದಲ್ಲಿ ಟ್ರಸ್ ಅವರ ಜ್ಯೂನಿಯರ್ ಆಗಿದ್ದ, ಮುಜಪ್ಫರಾಬಾದ್ನಲ್ಲಿ ಜನಿಸಿರುವ ಪಾಕಿಸ್ತಾನ ಮೂಲದ ರೆಹ್ಮಾನ್ ಚಿಸ್ತಿ ಕೂಡ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ಯುಕೆ ಯಲ್ಲಿ ಹುಟ್ಟಿದ ಆದರೆ, ಪಾಕಿಸ್ತಾನ ಮೂಲದ ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವೇದ್ ಸಹ ಸ್ಪರ್ಧೆಯಲ್ಲಿದ್ದಾರೆ.
ಭಾರತೀಯ ಮೂಲದ ಅಟಾರ್ನಿ ಜನರಲ್ ಸುಯೆಲ್ಲಾ ಬ್ರೇವರ್ಮ್ಯಾನ್, ಇರಾಕ್ ಮೂಲದ ನದೀಮ್ ಜಹಾವಿ, ನೈಜೀರಿಯಾ ಮೂಲದ ಕೆಮಿ ಬೆದಾನೋಚ್, ಟೋರಿ ಬ್ಯಾಕ್ ಬೆಂಚರ್ ಟಾಮ್ ಟುಗೆಂದಾತ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್, ವಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್ ಮತ್ತು ಸಾರಿಗೆ ಕಾರ್ಯದರ್ಶಿ ಗ್ರ್ಯಾಂಟ್ ಶಾಪ್ಸ್ ಸೇರಿದಂತೆ ಒಟ್ಟು 11 ಜನ ಈಗ ಬ್ರಿಟನ್ ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ.
ಯುಕೆ ಗೃಹ ಕಾರ್ಯದರ್ಶಿ, ಭಾರತೀಯ ಮೂಲದ ಪ್ರೀತಿ ಪಟೇಲ್ ಕೂಡ ಪ್ರಧಾನಿ ಹುದ್ದೆಯ ಸ್ಪರ್ಧೆಗೆ ಇಳಿಯುವ ಸಾಧ್ಯತೆಗಳಿವೆ. ತಾನೊಬ್ಬ ನಿಷ್ಠಾವಂತ ಬ್ರೆಕ್ಸಿಟ್ ಬೆಂಬಲಿಗರೆಂದು ಇವರು ವಿಶೇಷವಾಗಿ ಬಿಂಬಿಸಿಕೊಳ್ಳಬಹುದು. ಬ್ರೆಕ್ಸಿಟ್ ಕಟ್ಟಾ ಬೆಂಬಲಿಗರಾದ ಬ್ರೇವರ್ ಮ್ಯಾನ್ ಮತ್ತು ಬಡೆನೋಚ್ ಅಂಥವರನ್ನು ಪ್ರೀತಿ ಪಟೇಲ್ ತಮ್ಮ ಕ್ಯಾಂಪಿಗೆ ಸೆಳೆಯುವ ಸಾಧ್ಯತೆಗಳಿವೆ.
ಇದನ್ನು ಓದಿ:ಬ್ರಿಟನ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ