ವಿಲ್ಲುಪುರಂ(ತಮಿಳುನಾಡು): ವ್ಯಾಲೆಂಟೈನ್ ಡೇ ಯಂದು ಪ್ರೀತಿಗಾಗಿ ಪ್ರೇಮಿಗಳು ಏನೇನೆಲ್ಲಾ ಮಾಡ್ತಾರೆ. ಪರಸ್ಪರ ಶುಭಾಶಯ ಕೋರುವುದರೊಂದಿಗೆ ವಿವಿಧ ಗಿಫ್ಟ್ಗಳನ್ನು ವಿನಿಮಯ ಮಾಡಿಕೊಳ್ತಾರೆ. ರಕ್ತದಲ್ಲಿ ಪತ್ರ ಬರೆಯುವುದು, ಉಡುಗೊರೆ ನೀಡುವುದು ಸಹಜ. ಇಲ್ಲೊಬ್ಬ ಪ್ರೇಮಿ ತನ್ನ ಪ್ರೇಯಸಿಗೂ ಉಡುಗೊರೆ ನೀಡಿದ್ದಾನೆ. ಅದರಲ್ಲೇನು ವಿಶೇಷ ಅಂತೀರಾ. ಅಲ್ಲೇ ಇರೋದು ಟ್ವಿಸ್ಟ್. ಮನದೆನ್ನೆಯ ಸಂತೋಷಕ್ಕಾಗಿ ನೀಡಿದ ಗಿಫ್ಟ್ ಖರೀದಿಗೆ ಆತ ಮೇಕೆಯನ್ನು ಕಳ್ಳತನ ಮಾಡಿದ್ದ. ಅದರಿಂದ ಬಂದ ಹಣದಲ್ಲಿ ಉಡುಗೊರೆ ನೀಡಿದ್ದ. ಆದರೀಗ ಆ ಪ್ರೇಮಿ ಸಿಕ್ಕಿಬಿದ್ದು ಫಜೀತಿ ಅನುಭವಿಸುತ್ತಿದ್ದಾನೆ.
ತಮಿಳುನಾಡಿನ ವಿಲ್ಲುಪುರಂನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕಾಲೇಜು ವಿದ್ಯಾರ್ಥಿಗಳಾದ ಅರವಿಂದ್ ಕುಮಾರ್ (20) ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಪ್ರೇಮಿಗಳ ದಿನಕ್ಕೆ ಆತ ತನ್ನವಳಿಗೆ ಉಡುಗೊರೆ ನೀಡಲು ಬಯಸಿದ್ದ. ಆದರೆ, ಅದಕ್ಕೆ ಹಣ ಇಲ್ಲದೇ ಇದ್ದಾಗ ಸ್ನೇಹಿತ ಮೋಹನ್ ಜೊತೆ ಸೇರಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾನೆ.
ಅದರಂತೆ ಅರವಿಂದ್ಕುಮಾರ್ ಮತ್ತು ಮೋಹನ್ ನಿನ್ನೆ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ಮನೆಯ ಪಕ್ಕದಲ್ಲಿ ಕೊಟ್ಟಿಗೆಯಲ್ಲಿದ್ದ ಮೇಕೆಯನ್ನು ಕದಿಯಲು ಸಂಚು ರೂಪಿಸಿದ್ದರು. ಬೈಕ್ ಮೇಲೆ ಬಂದ ಇಬ್ಬರೂ ಮೇಕೆಯನ್ನು ಕಳ್ಳತನ ಮಾಡಿದ್ದಾರೆ. ಈ ವೇಳೆ ಮೇಕೆಗಳು ಕಿರುಚಾಡಲು ಶುರು ಮಾಡಿವೆ. ಸದ್ದು ಕೇಳಿದ ಮಾಲೀಕರು ಮನೆಯಾಚೆ ಬಂದು ನೋಡಿದಾಗ ಯುವಕರು ಬೈಕ್ನಲ್ಲಿ ಮೇಕೆಯನ್ನು ಕದ್ದೊಯ್ಯುತ್ತಿರುವುದು ನೋಡಿ ಕಿರುಚಾಡಿದ್ದಾರೆ.
ಇವರ ಕಿರುಚಾಟ ಕೇಳಿದ ಅಕ್ಕಪಕ್ಕದವರು ಓಡಿ ಬಂದಿದ್ದಾರೆ. ಮೇಕೆ ಕಳ್ಳತನ ಮಾಡಿದ ಯುವಕರನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು, ಪ್ರೇಮಿಯ ಮಾತು ಕೇಳಿ ನಗುವುದೋ, ಅಳುವುದೋ ಎಂಬಂತಾಗಿದೆ. ತನ್ನ ಪ್ರೇಯಸಿಗೆ ಉಡಗೊರೆ ನೀಡಲು ಮೇಕೆ ಕದ್ದಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಇತ್ತೀಚಿಗೆ ಸೇಂಚಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಕೆ ಕಳ್ಳತನದ ಘಟನೆಗಳು ಹೆಚ್ಚುತ್ತಿದ್ದು, ಬಂಧಿತ ಅರವಿಂದ್ ಕುಮಾರ್ ಹಾಗೂ ಮೋಹನ್ ಇದರಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂದು ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಯುವ ಪ್ರೇಮಿಗಳು ವಿವಿಧ ಕೊಡುಗೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ.
ಓದಿ: ಏರೋ ಇಂಡಿಯಾ 2023: ಮಾರಿಷಸ್ ಪೊಲೀಸ್ ಪಡೆಗೆ ಹೆಚ್ಎಎಲ್ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್ ಮಾರ್ಕ್ -3 ಹಸ್ತಾಂತರ