ಹೈದರಾಬಾದ್: ಸಯಾಮಿ ಅವಳಿಗಳಿಬ್ಬರು ತೆಲಂಗಾಣ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಅದ್ಭುತ ಸಾಧನೆ ಮಾಡಿದ್ದಾರೆ. ತೆಲಂಗಾಣ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ಪ್ರಥಮ ಹಾಗೂ ದ್ವಿತೀಯ ವರ್ಷದ ಪರೀಕ್ಷೆ ಫಲಿತಾಂಶಗಳನ್ನು ಮಂಗಳವಾರ ಪ್ರಕಟಿಸಿದೆ.
ಮೇ ತಿಂಗಳಲ್ಲಿ ನಡೆದ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪರೀಕ್ಷೆಗಳಿಗೆ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಸಯಾಮಿ ಅವಳಿಗಳಾದ ವೀಣಾ ಹಾಗೂ ವಾಣಿ ಇವರೂ ಪರೀಕ್ಷೆ ಬರೆದಿದ್ದರು. ಹುಟ್ಟುತ್ತಲೇ ಜೊತೆಯಾಗಿ ಅಂಟಿಕೊಂಡು ಹುಟ್ಟಿರುವ ಈ ಇಬ್ಬರು ಸಯಾಮಿ ಅವಳಿಗಳು ತಮ್ಮೆಲ್ಲ ಕಷ್ಟ, ಅಡೆತಡೆಗಳನ್ನು ಮೆಟ್ಟಿ ನಿಂತು ಪ್ರಥಮ ಶ್ರೇಣಿಯಲ್ಲಿ ಪಿಯುಸಿ ಪಾಸಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಠೋಡ್ ವೀಣಾ - ವಾಣಿ ಇವರನ್ನು ಅಭಿನಂದಿಸಿದ್ದಾರೆ. ವೀಣಾ - ವಾಣಿ ಇಬ್ಬರೂ ಪರೀಕ್ಷೆಗಳನ್ನು ಬರೆಯಲು ಪ್ರಾಮಾಣಿಕವಾಗಿ ಸಹಕಾರ ನೀಡಿದ ಶಿಕ್ಷಕರಿಗೂ ಸಚಿವೆ ರಾಠೋಡ್ ಧನ್ಯವಾದಗಳನ್ನು ತಿಳಿಸಿದ್ದಾರೆ. ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರ ರೆಡ್ಡಿ ಫಲಿತಾಂಶಗಳನ್ನು ಘೋಷಿಸಿದ್ದು, ಪ್ರಥಮ ಹಾಗೂ ದ್ವಿತೀಯ ವರ್ಷ ಸೇರಿ ಶೇ 60 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವೀಣಾ ಮತ್ತು ವಾಣಿ ಇಬ್ಬರೂ ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸು ಹೊಂದಿದ್ದಾರೆ.
ಇದನ್ನು ಓದಿ:ಟಿ - ಹಬ್ 2 ಉದ್ಘಾಟಿಸಿದ ಸಿಎಂ ಕೆಸಿಆರ್.. ತೆಲಂಗಾಣ ಸರ್ಕಾರ ಶ್ಲಾಘಿಸಿದ ರತನ್ ಟಾಟಾ!