ಬಿಲಾಸ್‌ಪುರ(ಛತ್ತೀಸ್ಗಢ ): ಸಾಮಾನ್ಯವಾಗಿ ನಾವು ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳ ಕಳ್ಳತನ ಮಾಡುವುದನ್ನು ಕೇಳಿದ್ದೇವೆ. ಹೀಗೆ ದೇಶದಲ್ಲಿ ಒಂದಿಲ್ಲೊಂದು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹುದೇ ಒಂದು ಚಿತ್ರ- ವಿಚಿತ್ರ ಘಟನೆ ಛತ್ತೀಸ್ಗಢದಿಂದ ವರದಿಯಾಗಿದೆ. ಬಿಲಾಸ್‌ಪುರ ಜಿಲ್ಲೆಯ ಸೀಲ್ದಾಹ ಗ್ರಾಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ನಡೆದಿದೆ.
ವಿಚಿತ್ರ ಏನು ಎಂದರೆ ಇದು ಕೋಳಿ ಜಗಳ. ಕೊಳಿಗೆ ರೆಕ್ಕೆ ಕತ್ತರಿಸಿದ್ದಕ್ಕೇ ಮಹಿಳೆ ಇಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಗ್ರಾಮದ ಜಾನಕಿ ಬಾಯಿ ಎಂಬ ಮಹಿಳೆ ತಮ್ಮ ಮನೆಯಲ್ಲಿ ಕೋಳಿಗಳನ್ನು ಸಾಕಿದ್ದಾರೆ. ಕೋಳಿಗಳೊಂದಿಗೆ ಅವರು ಅತ್ಯುತ್ತಮ ಬಾಂಧವ್ಯವನ್ನೂ ಇಟ್ಟುಕೊಂಡಿದ್ದಾರೆ. ಅಂದ ಹಾಗೆ ಕಳೆದ ಭಾನುವಾರ ನೆರೆ ಮನೆಯವರು ಕೋಳಿಯನ್ನು ಕದ್ದು, ರೆಕ್ಕೆಯನ್ನು ಕತ್ತರಿಸಿದ್ದಾರಂತೆ. ಇದನ್ನು ಕಂಡ ಅವರು ರತನ್‌ಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಮೌಖಿಕ ದೂರು ನೀಡಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅಷ್ಟಕ್ಕೂ ನಡೆದಿರುವುದಾದರೂ ಏನು? - ರತನ್‌ಪುರದಲ್ಲಿ ಹುಂಜ ಕಳ್ಳತನ: ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಮನೆಗಳಲ್ಲಿ ಅಂದು ನಾನ್ ವೆಜ್ ತಿನ್ನುವುದು ರೂಢಿ. ಈ ಹಿನ್ನೆಲೆಯಲ್ಲಿ ಬಿಲಾಸ್‌ಪುರ ಜಿಲ್ಲೆಯ ಸೀಲ್ದಾಹ ಗ್ರಾಮದಲ್ಲಿ ಹುಂಜವೊಂದರ ಕಳ್ಳತನ ನಡೆದಿದೆ. ಪಕ್ಕದ ಮನೆಯವರೇ ಹುಂಜ ಕದ್ದಿದ್ದಾರೆ ಎಂಬುದು ಹೇಗೋ ಅದರ ಮಾಲೀಕಳಿಗೆ ಗೊತ್ತಾಗಿದೆ. ಆ ಹುಂಜವನ್ನ ಕದ್ದವರಿಂದ ವಾಪಸ್ ಪಡೆದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಮಹಿಳೆ.
ಮಹಿಳೆ ಈ ಬಗ್ಗೆ ಹೇಳಿದ್ದೇನು?: ಗಾಯಗೊಂಡ ಹುಂಜದ ಸಮೇತ ಠಾಣೆಗೆ ಆಗಮಿಸಿದ ಜಾನಕಿ ಬಾಯಿ, ನೆರೆಹೊರೆಯಲ್ಲಿ ವಾಸವಾಗಿರುವ ದಂಪತಿ, ನನ್ನ ಮನೆ ಮುಂದೆ ಇದ್ದ ಕೋಳಿಯನ್ನು ಕದ್ದಿದ್ದರು. ಕೋಳಿ ಕಳ್ಳತನವಾಗುತ್ತಿರುವುದನ್ನು ನಾನೇ ನೋಡಿ ಸ್ಥಳಕ್ಕಾಗಮಿಸಿ ಅವರ ಬಳಿ ಇದ್ದ ಕೋಳಿಯನ್ನು ಹೊರ ತಂದಿದ್ದೇನೆ. ನಾನು ಅವರ ಬಳಿ ಹೋಗುವಷ್ಟರಲ್ಲಿ ಅವರು ಕೋಳಿಯ ರೆಕ್ಕೆಯನ್ನು ಮುರಿದಿದ್ದರು. ಈ ಹಿಂದೆ ಇದೇ ರೀತಿ ಮನೆಯಿಂದ ಕೋಳಿಗಳು ನಾಪತ್ತೆಯಾಗಿದ್ದವು, ಹೀಗಾಗಿ ಕಾಯ್ದಿದ್ದು ನಾನು ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇನೆ ಎಂದು ಪೊಲೀಸರಿಗೆ ಮಹಿಳೆ ವಿವರಿಸಿದ್ದಾರೆ. ನಂತರ ಪೊಲೀಸರು ದೂರಿನ ಬಗ್ಗೆ ತನಿಖೆ ನಡೆಸುವುದಾಗಿ ಮಹಿಳೆಗೆ ಭರವಸೆ ನೀಡಿ ಕಳುಹಿಸಿದ್ದಾರಂತೆ.
ಕೋಳಿ ಕಳ್ಳತನ ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ಈ ಕುರಿತು ರತನ್‌ಪುರ ಪೊಲೀಸ್ ಠಾಣಾಧಿಕಾರಿ ಪ್ರಸಾದ್ ಸಿನ್ಹಾ ಮಾತನಾಡಿದ್ದು, "ಮಹಿಳೆ ಸೋಮವಾರ ಕೋಳಿಯೊಂದಿಗೆ ಠಾಣೆಗೆ ಬಂದಿದ್ದರು. ಈ ವೇಳೆ ಹುಂಜ ಗಾಯಗೊಂಡಿತ್ತು. ಈ ಬಗ್ಗೆಯಿಂದ ಮಹಿಳೆ ಮೌಖಿಕ ದೂರು ಪಡೆದುಕೊಂಡಿದ್ದೇವೆ. ಮೌಕಿಕ ದೂರು ನೀಡಿ ಹೋದ ಬಳಿಕ ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲು ಮತ್ತೆ ದೂರುದಾರು ಮಹಿಳೆಯನ್ನು ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದೆವು. ಆದರೆ ಆ ಮಹಿಳೆ ಪೊಲೀಸ್ ಠಾಣೆ ಕಡೆ ಬಂದಿಲ್ಲ. ಈ ದೂರಿನ ಬಗ್ಗೆ ಏನು ಮಾಡಬಹುದು ಎಂಬ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಮಹಿಳೆ ದೂರು ನೀಡಿರುವವರ ಬಗ್ಗೆಯೂ ಮಾಹಿತಿ ತೆಗೆದುಕೊಳ್ಳಲಾಗುತ್ತಿದೆ " ಎಂದು ಹೇಳಿದ್ದಾರೆ.
ಈ ಹಿಂದೆಯೂ ಪಚ್ಚಪೇಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಂಜ ಕಳ್ಳತನದ ಘಟನೆ ವರದಿಯಾಗಿತ್ತು. ಜನವರಿ 27 ರಂದು ಮಸ್ತೂರಿಯ ಪಚ್ಪೇಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೊಡಡಿಹ್ ಗ್ರಾಮದ ಅಂಗಡಿಯ ಹಿಂಬಾಗಿಲನ್ನು ಮುರಿದು ಕಳ್ಳರು ಸುಮಾರು 10 ಕೋಳಿಗಳನ್ನು ಕದ್ದೊಯ್ದಿದ್ದರು. ಅಂಗಡಿ ನಿರ್ವಾಹಕರ ದೂರಿನ ಮೇರೆಗೆ ಪಚ್ಚಪೇಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ:ಸಾಕುಪ್ರಾಣಿಗಳ ಟ್ರ್ಯಾಕಿಂಗ್ಗೆ ಟ್ರ್ಯಾಕರ್ ಬಳಸುತ್ತೀರಾ? ನೀವೇ ಟ್ರ್ಯಾಕ್ ಆಗ್ತೀರಾ ಹುಷಾರ್!