ಬಿಜಾಪುರ (ಛತ್ತೀಸ್ಗಢ): ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಪ್ರಮುಖ ಘಟಕವಾದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಇನ್ಸ್ಪೆಕ್ಟರ್ವೊಬ್ಬರು ತಮ್ಮ ಸರ್ವೀಸ್ ಎಕೆ 47 ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ನಡೆದಿದೆ.
ಕೋಬ್ರಾ 210ನೇ ಬೆಟಾಲಿಯನ್ನ ಇನ್ಸ್ಪೆಕ್ಟರ್ ಸಫಿ ಆಖ್ತಾರ್ ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ. ರಾಜಧಾನಿ ರಾಯಪುರದಿಂದ 400 ಕಿಮೀ ದೂರ ಇರುವ ಬಿಜಾಪುರದಲ್ಲಿರುವ ಸಿಆರ್ಪಿಎಫ್ನ 170ನೇ ಬೆಟಾಲಿಯನ್ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನ ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿದ ಸಹೋದ್ಯೋಗಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ಸ್ಪೆಕ್ಟರ್ ಅನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಮೋಕೂರ್ ಕ್ಯಾಂಪ್ನಲ್ಲಿ ಕಮಾಂಡೋ ಆಖ್ತಾರ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಆದರೆ, ಇತ್ತೀಚೆಗೆ ವಿಜಾಪುರಕ್ಕೆ ಆಗಮಿಸಿದ್ದರು. ಕೆಲ ದಿನಗಳಲ್ಲಿ ಅವರು ರಜೆ ಮೇಲೆ ದೆಹಲಿಗೆ ಹೋಗಬೇಕಿತ್ತು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಯಾವುದೇ ಡೆತ್ನೋಟ್ ಸಹ ಪತ್ತೆಯಾಗಿಲ್ಲ. ಕೌಟುಂಬಿಕ ವಿಷಯವಾಗಿ ಸಾವಿಗೆ ಶರಣಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಇದೆ. ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೋಬ್ರಾ ಪಡೆಯು ಸಿಆರ್ಪಿಎಫ್ನ ಅಗ್ರ ಘಟಕ. ರಾಜ್ಯದ ನಕ್ಸಲ್‌ಪೀಡಿತ ಪ್ರದೇಶಗಳಾದ ಬಸ್ತಾರ್ ವಿಭಾಗದ ದಂತೇವಾಡ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಕೋಬ್ರಾ ಕಮಾಂಡೋಗಳನ್ನು ನಿಯೋಜಿಸಲಾಗಿರುತ್ತದೆ. ನಕ್ಸಲ್‌ವಿರೋಧಿ ಕಾರ್ಯಾಚರಣೆಯಲ್ಲಿ ಕೋಬ್ರಾ ಪಡೆ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಮಾವೋವಾದಿಗಳ ದಾಳಿ, ಇಬ್ಬರು ಯೋಧರು ಸಾವು ಪ್ರಕರಣ: ಜಾರ್ಖಂಡ್ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಆಗಸ್ಟ್ 15ರಂದು ನಡೆದ ಮಾವೋವಾದಿಗಳ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಮೃತರನ್ನು ಜಾರ್ಖಂಡ್ ಜಾಗ್ವಾರ್ ಪಡೆಯ ಸಬ್ ಇನ್ಸ್ಪೆಕ್ಟರ್ ಅಮಿತ್ ತಿವಾರಿ ಮತ್ತು ಕಾನ್ಸ್ಟೇಬಲ್ ಗೌತಮ್ ರಾಣಾ ಎಂದು ಗುರುತಿಸಲಾಗಿತ್ತು.
ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಸಿಆರ್‌ಪಿಎಫ್ ಕ್ಯಾಂಪ್‌ನಿಂದ ಟೆಂತೋ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬ್ಕಾ ಅರಣ್ಯದಲ್ಲಿರುವ ಜಾಗ್ವಾರ್ ಕ್ಯಾಂಪ್‌ಗೆ ಆಹಾರ ಪೂರೈಸುತ್ತಿದ್ದಾಗ ಯೋಧರ ಮೇಲೆ ಅಂದು ಮಧ್ಯರಾತ್ರಿ 12.30ಕ್ಕೆ ಮಾವೋವಾದಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಇಬ್ಬರು ಯೋಧರು ಹುತಾತ್ಮರಾಗಿದ್ದರು. ಪೊಲೀಸ್ ಪಡೆಗಳು ಕಾರ್ಯಾಚರಣೆ ಕೈಗೊಂಡು ಪ್ರತೀಕಾರದ ಗುಂಡಿನ ದಾಳಿ ನಡೆಸಿದ್ದರು. ಆದರೂ, ಮಾವೋವಾದಿಗಳು ಕತ್ತಲೆಯಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ದಾಳಿಯನ್ನು ಮಿಸಿರ್ ಬೆಸ್ರಾ ಗುಂಪು ನಡೆಸಿತ್ತು ಎಂದು ವರದಿಯಾಗಿತ್ತು.
ಇದನ್ನೂ ಓದಿ: MP crime: ಗುಂಡು ಹಾರಿಸಿ ಇಬ್ಬರ ಹತ್ಯೆಗೈದ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್! ಗರ್ಭಿಣಿ ಸೇರಿ 6 ಜನರಿಗೆ ಗಾಯ