ಲಖನೌ, ಉತ್ತರ ಪ್ರದೇಶ: ಸತತವಾಗಿ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಗೆ ಲಖನೌದಲ್ಲಿರುವ ಲೋಕಭವನದಲ್ಲಿ ಮೊದಲ ಸಂಪುಟ ಸಭೆ ನಡೆಸಿದ ಅವರು ಮುಂದಿನ 3 ತಿಂಗಳಿಗೆ ಉತ್ತರ ಪ್ರದೇಶದ ಜನರಿಗೆ ಉಚಿತ ಪಡಿತರ ನೀಡಲಿದ್ದೇವೆ ಎಂದು ಘೋಷಿಸಿದ್ದು, ಈ ಮೂಲಕ ರಾಜ್ಯದ 15 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.
ಅಂತ್ಯೋದಯ ಕಾರ್ಡ್ ಹೊಂದಿರುವ ಬಡ ಫಲಾನುಭವಿಗಳಿಗೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳವರೆಗೆ ಉಚಿತ ಪಡಿತರವನ್ನು ನೀಡಲಾಗುವುದು. ರಾಷ್ಟ್ರೀಯತೆ, ಸುರಕ್ಷತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ರಾಜ್ಯದ ಜನತೆಗೆ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಜನಸೇವೆ ಮಾಡುವುದು ಅತ್ಯಂತ ಪುಣ್ಯದ ಕಾರ್ಯವಾಗಿದ್ದು, ಬದ್ಧತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವುದರಿಂದ ಸಂತೃಪ್ತಿ ದೊರೆಯುತ್ತದೆ. ಜನಪ್ರತಿನಿಧಿಗಳು ಕಾರ್ಯಕ್ಷಮತೆ ಆಧಾರಿತ ಕೆಲಸಗಳತ್ತ ಗಮನ ಹರಿಸಬೇಕು ಸಭೆಯ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಂಪುಟ ಸಭೆಯ ನಂತರ, ಸಿಎಂ ಯೋಗಿ ಆದಿತ್ಯನಾಥ್ ಬೆಳಗ್ಗೆ 11ಗಂಟೆಗೆ ಉತ್ತರ ಪ್ರದೇಶದ ರಾಜಭವನದಲ್ಲಿ ಹಂಗಾಮಿ ಸ್ಪೀಕರ್ ರಮಾಪತಿ ಶಾಸ್ತ್ರಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.
ಶೀಘ್ರದಲ್ಲೇ ಲಖನೌದ ಯೋಜನಾ ಭವನದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಉನ್ನತ ಅಧಿಕಾರಿಗಳನ್ನು ಉದ್ದೇಶಿಸಿ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಲಿದ್ದಾರೆ.
ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಹಿಜಾಬ್ ಧರಿಸಿ ಬಂದರೆ ನೋ ಎಂಟ್ರಿ: ಸರ್ಕಾರಿ ಶಾಲೆಗಳಲ್ಲಿ ನಿಗದಿಪಡಿಸಿದ ಶಾಲಾ ಸಮವಸ್ತ್ರ ಕಡ್ಡಾಯ