ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮಾರ್ಚ್ 22ರಂದು ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದಕ್ಕಾಗಿ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಈಗಾಗಲೇ ತಯಾರಿ ಆರಂಭಗೊಂಡಿದ್ದು, ಅದ್ಧೂರಿ ವೇದಿಕೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಮೈದಾನದಲ್ಲಿ 50 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯವಿದ್ದು, ಪದಗ್ರಹಣ ಕಾರ್ಯಕ್ರಮಕ್ಕಾಗಿ 60ರಿಂದ 65 ಸಾವಿರ ಜನರು ಆಗಮಿಸುವ ಸಾಧ್ಯತೆ ಇದೆ.
ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ನೂತನ ಸರ್ಕಾರ ರಚನೆಗೆ ಬಿಜೆಪಿ ಹೈಕಮಾಂಡ್ ಈಗಾಗಲೇ ವೀಕ್ಷಕರ ನೇಮಕ ಮಾಡಿದ್ದು, ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ. ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಯೋಗಿ ಆದಿತ್ಯನಾಥ್ 2.0 ಕ್ಯಾಬಿನೆಟ್ನಲ್ಲಿ ಮೂವರು ಉಪಮುಖ್ಯಮಂತ್ರಿಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದ್ದು, 50 ಶಾಸಕರಿಗೆ ಸಚಿವಗಿರಿ ನೀಡಲು ಮುಂದಾಗಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿರಿ: 'ಯೋಗಿ ಸರ್ಕಾರ್ 2.0' ಕ್ಯಾಬಿನೆಟ್ನಲ್ಲಿ 50 ಸಚಿವರು, ಮೂವರು ಉಪ ಮುಖ್ಯಮಂತ್ರಿಗಳು?
ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದ ನಿರ್ದೇಶಕ ಉದಯ್ ಕುಮಾರ್ 'ಈಟಿವಿ ಭಾರತ' ಜೊತೆ ಮಾತನಾಡಿದ್ದು, ಮೈದಾನದಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಾಥಮಿಕ ಮಾಹಿತಿ ಸಿಕ್ಕಿದ್ದು, ಹೀಗಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ದೊಡ್ಡ ಮಟ್ಟದ ಈವೆಂಟ್ ಆಗಿರುವ ಕಾರಣ ಎಲ್ಲ ರೀತಿಯಿಂದಲೂ ಸಿದ್ಧರಾಗಿದ್ದೇವೆ ಎಂದಿದ್ದಾರೆ.
2017ರಲ್ಲಿ ಯೋಗಿ ಆದಿತ್ಯನಾಥ್ ಸ್ಮೃತಿ ಉಪವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಆದರೆ, ಈ ಸಲ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಮಾರ್ಚ್ 21ರಂದು ಹೋಳಿ ಹಬ್ಬವಿದ್ದು, ಯೋಗಿ ಆದಿತ್ಯನಾಥ್ ಗೋರಖ್ಪುರದಲ್ಲಿ ಇರಲಿದ್ದಾರೆ. ಇದಾದ ಬಳಿಕ ಮಾರ್ಚ್ 22ರಂದು ಲಖನೌಗೆ ತೆರಳಿ, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.