ಮುಂಬೈ: ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿ ಬೀಸಲು ಶುರುವಾಗಿದ್ದು, ಈಗಾಗಲೇ ನಿತ್ಯ ಮೀತಿ ಮೀರಿ ಕೊರೊನಾ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ ಈಗಾಗಲೇ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಘೋಷಣೆ ಮಾಡಲಾಗಿದ್ದು, ಇದೀಗ ಲಾಕ್ಡೌನ್ಗೆ ಸಂಬಂಧಿಸಿದಂತೆ ನಾಳೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ವಿಪತ್ತು ನಿರ್ವಹಣಾ ಸಚಿವ ವಿಜಯ್ ವಾಡೆಟ್ಟಿವಾರ್ ಮಾತನಾಡಿದ್ದು, ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲು ಪ್ರಸ್ತಾಪ ಮಾಡಲಾಗಿದ್ದು, ಇದೇ ವಿಚಾರವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಾಳೆ ಸರ್ವಪಕ್ಷ ಸಭೆ ಕರೆದಿದ್ದಾರೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರತಿದಿನ 50 ರಿಂದ 60 ಸಾವಿರ ಕೋವಿಡ್ ಕೇಸ್ ದಾಖಲಾಗುತ್ತಿದ್ದು, ಸದ್ಯ ರಾಜ್ಯದಲ್ಲಿ 5.31 ಸಕ್ರಿಯ ಪ್ರಕರಣಗಳಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಶೀಘ್ರದಲ್ಲೇ 10 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣ ಹೊಂದಲಿದ್ದೇವೆ. ಆದರೆ ಈ ಪರಿಸ್ಥಿತಿ ತಪ್ಪಿಸಲು ಇದೀಗ ಜನಸಂದಣಿ ಕಡಿಮೆ ಮಾಡುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಸಿವು ತಾಳಲಾಗದೇ ಊಟ ಮಾಡಿ ಬಿಸಾಡಿದ ಫ್ಲೇಟ್ ನೆಕ್ಕಿದ ಬಾಲಕ... ವಿಡಿಯೋ ವೈರಲ್!
ಈ ಜನಸಂದಣಿ ಸರಪಳಿ ಮುರಿಯಬೇಕಾದರೆ ಅರ್ಧದಷ್ಟು ಅಂಗಡಿ, ಸಂಸ್ಥೆ ತೆರೆದಿಡಲು ಸಾಧ್ಯವಿಲ್ಲ. ಮೂರು ವಾರಗಳ ಕಾಲ ಕಟ್ಟುನಿಟ್ಟಾದ ಲಾಕ್ಡೌನ್ ಘೋಷಣೆ ಮಾಡಲು ಈಗಾಗಲೇ ಪ್ರಸ್ತಾಪ ಮಾಡಲಾಗಿದೆ ಎಂದಿದ್ದಾರೆ.
ನಾಳೆ ಸರ್ವಪಕ್ಷ ಸಭೆ: ಇದೇ ವಿಚಾರವಾಗಿ ನಾಳೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ವಪಕ್ಷ ಸಭೆ ಕರೆದಿದ್ದು, ರಾಜ್ಯದಲ್ಲಿ ಲಾಕ್ಡೌನ್ ಹೇರಿಕೆ ಮಾಡುವ ಕುರಿತು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಮಹಾರಾಷ್ಟ್ರ ಈಗಾಗಲೇ ಕೆಲವೊಂದು ಮಹತ್ವದ ನಿರ್ಧಾರ ಕೈಗೊಂಡಿರುವುದು ಗಮನಾರ್ಹ.