ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಈಗಾಗಲೇ ಸುಪ್ರೀಂಕೋರ್ಟ್ ಅಂಗಳ ತಲುಪಿದ್ದು, ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯ ಮಹಾರಾಷ್ಟ್ರ ಸರ್ಕಾರ, ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ, ಎನ್‌ಸಿಪಿ ಮುಖ್ಯಸ್ಥ ಹಾಗೂ ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್ ನೀಡಿದೆ. ಇದರ ಜೊತೆಗೆ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ. ಇದರ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ಧವ್ ಠಾಕ್ರೆ ಎರಡು ಸಲ ಮುಂದಾಗಿದ್ದರೆಂಬ ಮಹತ್ವದ ಮಾಹಿತಿ ಹೊರಬಿದ್ದಿದೆ.
ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಜೂನ್ 21 ಹಾಗೂ ಇಂದು ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಉದ್ಧವ್ರನ್ನು ಮನವೊಲಿಸಿದ್ದು, ರಾಜೀನಾಮೆ ನೀಡದಂತೆ ತಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 84ನೇ ವಯಸ್ಸಿನಲ್ಲಿ ಡಿ.ಲಿಟ್ ಪದವಿ ಪಡೆದು ವಿಶಿಷ್ಟ ದಾಖಲೆ ಬರೆದ ಅಮಲಧಾರಿ ಸಿಂಗ್
ಮಹಾರಾಷ್ಟ್ರದಲ್ಲಿ ಒಟ್ಟು 55 ಶಾಸಕರನ್ನ ಹೊಂದಿರುವ ಶಿವಸೇನೆಯ 40 ಶಾಸಕರು ಈಗಾಗಲೇ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದಾರೆ. ಜೊತೆಗೆ ಸರ್ಕಾರಕ್ಕೆ ತಾವು ನೀಡಿರುವ ಬೆಂಬಲ ವಾಪಸ್ ಪಡೆದುಕೊಂಡಿರುವುದಾಗಿ ಘೋಷಿಸಿದ್ದಾರೆ. ಹೀಗಾಗಿ, ಉದ್ಧವ್ ಬೆಂಬಲಕ್ಕೆ ಇದೀಗ ಕೇವಲ 15 ಶಾಸಕರು ಹಾಗೂ ನಾಲ್ವರು ಸಚಿವರು ಮಾತ್ರ ನಿಂತಿದ್ದಾರೆ. ಹೀಗಾಗಿ, ಸರ್ಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಾಗಿರುವ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ಮುಂದಾಗಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. 288 ಸದಸ್ಯರ ಬಲಾಬಲ ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 55 ಶಾಸಕರ ಬಲ ಹೊಂದಿದ್ದು, ಎನ್‌ಸಿಪಿ 53 ಹಾಗೂ ಕಾಂಗ್ರೆಸ್ 44 ಶಾಸಕರನ್ನ ಹೊಂದಿದೆ.
ಏಕನಾಥ್ ಶಿಂದೆ ಟ್ವೀಟ್: ಸುಪ್ರೀಂಕೋರ್ಟ್ನಿಂದ ಬಂಡಾಯ ಶಾಸಕರನ್ನ ಅನರ್ಹಗೊಳಿಸದಂತೆ ಸೂಚನೆ ನೀಡಿರುವ ಬೆನ್ನಲ್ಲೇ ಬಂಡಾಯ ಶಾಸಕರ ಬಣದ ನಾಯಕ ಏಕನಾಥ್ ಶಿಂದೆ ಟ್ವೀಟ್ ಮಾಡಿದ್ದು, ಇದು ಬಾಳಾಸಾಹೇಬರ ಹಿಂದುತ್ವದ ವಿಜಯ ಎಂದಿದ್ದಾರೆ.