ಸೇಲಂ/ತಮಿಳುನಾಡು: ಅನೈವಾರಿ ಜಲಪಾತಕ್ಕೆ ಪ್ರವಾಸಕ್ಕೆ ಎಂದು ಬಂದು ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆ ಹಾಗೂ ಮಗುವನ್ನು ರಕ್ಷಿಸಿದ ಇಬ್ಬರು ಸಾಹಸಿ ವ್ಯಕ್ತಿಗಳನ್ನು ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘಿಸಿದ್ದಾರೆ.
ಕೋವಿಡ್ ಲಾಕ್ಡೌನ್ ತೆರವು ಬಳಿಕ ತಮಿಳುನಾಡು ಪ್ರವಾಸಿ ಸ್ಥಳಗಳು ಸಾರ್ವಜನಿಕರಿಗೆ ತೆರೆದುಕೊಂಡಿವೆ. ಈ ಹಿನ್ನೆಲೆ ಪ್ರವಾಸಕ್ಕೆಂದು ಅನೈವಾರಿ ಜಲಪಾತಕ್ಕೆ ಬಂದಿದ್ದ ವೇಳೆ ಭಾರಿ ಮಳೆಯಿಂದಾಗಿ ಜಲಪಾತದಲ್ಲಿ ಪ್ರವಾಹ ಉಂಟಾಗಿದೆ. ಒಟ್ಟು ಐವರು ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿದ್ದಾರೆ. ಇವರಲ್ಲಿ ತಾಯಿ - ಮಗು ಸಹ ಇದ್ದರು.
ಇದನ್ನು ಕಂಡ ಇಬ್ಬರು ವ್ಯಕ್ತಿಗಳು ತಮ್ಮ ಪ್ರಾಣ ಪಣಕಿಟ್ಟು ಅವರಿಬ್ಬರನ್ನು ಕಾಪಾಡಿದ್ದಾರೆ. ತಾಯಿ ಮತ್ತು ಮಗು ಅಪಾಯದಿಂದ ಪಾರಾಗಿದ್ದು, ರಕ್ಷಣಾ ಕಾರ್ಯದಲ್ಲಿ ಅರಣ್ಯಾಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದ ಇಬ್ಬರು ಏಕಾಏಕಿ ಸಮತೋಲನ ಕಳೆದುಕೊಂಡು ನೀರಿಗೆ ಬಿದ್ದಿದ್ದಾರೆ. ಆದರೆ, ತೊಂದರೆಯಿಂದ ಪಾರಾಗಿದ್ದಾರೆ.

ಅಪಾಯಕಾರಿ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಸಹಾಯ ಮಾಡಿದ ಇಬ್ಬರನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಭಿನಂದಿಸಿದ್ದಾರೆ. ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ತಾಯಿ ಮತ್ತು ಮಗನನ್ನು ಉಳಿಸಿದವರ ಧೈರ್ಯದ ಕಾರ್ಯ ಶ್ಲಾಘನೀಯ, ಇತರರ ಪ್ರಾಣ ಉಳಿಸಲು ಹರಸಾಹಸಪಡುವವರ ಮನಸ್ಸಲ್ಲಿ ಮಾನವೀಯತೆ ಬೆಳಗುತ್ತದೆ, ವಿಪತ್ತುಗಳ ಸಂದರ್ಭದಲ್ಲಿ ಸಾರ್ವಜನಿಕರು ಜಾಗೃತರಾಗಿರಬೇಕು" ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.