ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ತೆಲಂಗಾಣಕ್ಕೆ ತೆರಳಲಿದ್ದಾರೆ. ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಅವರು ಕಾಂಗ್ರೆಸ್ ಪರ ಮತಯಾಚನೆ ಮಾಡುವರು. ಬೆಳಿಗ್ಗೆ 11.30ಗಂಟೆಗೆ ಸಿದ್ದರಾಮಯ್ಯ ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಡಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕಾಮರೆಡ್ಡಿ ಜಿಲ್ಲೆಗೆ ತೆರಳುವರು. ಕಾಮರೆಡ್ಡಿ ನಗರದಲ್ಲಿ 2 ಗಂಟೆಗೆ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮತಯಾಚಿಸುವರು. ಸಂಜೆ 6.30ಕ್ಕೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಡಿ.ಕೆ.ಶಿವಕುಮಾರ್ ಕ್ಯಾಂಪೇನ್: ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ತೆಲಂಗಾಣದ ಕೋದಡ್ನಲ್ಲಿ ಪ್ರಚಾರ ನಡೆಸಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ ಬೆಂಗಳೂರಿನಿಂದ ತೆಲಂಗಾಣಕ್ಕೆ ತೆರಳಿ ಸಂಜೆ 5ಕ್ಕೆ ಚುನಾವಣಾ ಪ್ರಚಾರ ನಡೆಸುವರು. ನಂತರ, ಅಲ್ಲಿಂದ ಹುಜೂರ್ ನಗರಕ್ಕೆ ತೆರಳಿ ರಾತ್ರಿ 8 ಗಂಟೆಗೆ ರೋಡ್ ಶೋ ನಡೆಸುವ ಕಾರ್ಯಕ್ರಮವಿದೆ. ರಾತ್ರಿ ವಿಜಯವಾಡದಲ್ಲಿ ತಂಗಲಿದ್ದಾರೆ.
ರಾಜ್ಯದ 10 ಸಚಿವರು, 48 ಶಾಸಕರಿಗೆ ಟಾಸ್ಕ್: ಕರ್ನಾಟಕದ ಸಚಿವರು ಮತ್ತು ಶಾಸಕರುಗಳನ್ನು ತೆಲಂಗಾಣ ವಿಧಾನಸಭೆ ಚುನಾವಣೆಗೆ ಕ್ಲಸ್ಟರ್ ಉಸ್ತುವಾರಿ ಹಾಗೂ ಕ್ಷೇತ್ರವಾರು ವೀಕ್ಷಕರಾಗಿ ಎಐಸಿಸಿ ಇತ್ತೀಚೆಗೆ ನೇಮಿಸಿದೆ. 10 ಸಚಿವರನ್ನು ಕ್ಲಸ್ಟರ್ ಉಸ್ತುವಾರಿಯಾಗಿ ಮತ್ತು 48 ಶಾಸಕರನ್ನು ಕ್ಷೇತ್ರವಾರು ವೀಕ್ಷಕರಾಗಿ ನೇಮಿಸಲಾಗಿದೆ. ಚುನಾವಣೆಯ ಎಐಸಿಸಿ ಕ್ಲಸ್ಟರ್ ಉಸ್ತುವಾರಿಯಾಗಿ ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಎಂ.ಸಿ.ಸುಧಾಕರ್, ಈಶ್ವರ್ ಖಂಡ್ರೆ, ಶರಣ ಪ್ರಕಾಶ ಪಾಟೀಲ್, ಕೆ.ಹೆಚ್.ಮುನಿಯಪ್ಪ, ಕೃಷ್ಣ ಭೈರೇಗೌಡ, ಜಮೀರ್ ಅಹಮ್ಮದ್ ಖಾನ್, ಶಿವರಾಜ್ ತಂಗಡಗಿ ಮತ್ತು ಬಿ.ನಾಗೇಂದ್ರ ಅವರನ್ನು ನೇಮಿಸಲಾಗಿದೆ.
ಕ್ಷೇತ್ರವಾರು ವೀಕ್ಷಕರಾಗಿ 48 ಕಾಂಗ್ರೆಸ್ ಶಾಸಕರನ್ನು ನೇಮಿಸಲಾಗಿದೆ. ಇವರಲ್ಲಿ ಎಂಎಲ್‌ಸಿ ಉಮಾಶ್ರೀ, ಮಹಂತೇಶ್ ಕೌಜಲಗಿ, ಸಲೀಂ ಅಹಮ್ಮದ್, ಯು.ಬಿ.ವೆಂಕಟೇಶ್, ಅನಿಲ್ ಚಿಕ್ಕಮಾಧು, ಪ್ರಕಾಶ್ ಹುಕ್ಕೇರಿ, ಕೋನಾರೆಡ್ಡಿ, ಯು.ಬಿ.ಬಣಕರ್, ಪ್ರದೀಪ್ ಈಶ್ವರ್, ನಾರಾಯಣ ಸ್ವಾಮಿ, ವಿನಯ್ ಕುಲಕರ್ಣಿ, ಶಿವಣ್ಣ, ಎಂ.ಆರ್.ಸೀತಾರಾಮ್, ಕಂಪ್ಲಿ ಗಣೇಶ್, ಬಸವರಾಜ ರಾಯರೆಡ್ಡಿ ಇದ್ದಾರೆ.
ಇಂದು (ನವೆಂಬರ್ 10) ತೆಲಂಗಾಣ ವಿಧಾನಸಭೆ ಚುನಾವಣೆಗೆ ನಾಮಮತ್ರ ಸಲ್ಲಿಸಲು ಕೊನೆಯ ದಿನ. ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಜರುಗಲಿದೆ. ಚುನಾವಣಾ ಆಯೋಗ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಅಭ್ಯರ್ಥಿಗಳು ಸಲ್ಲಿಸಿರುವ ಉಮೇದುವಾರಿಕೆಗಳ ಪರಿಶೀಲನೆ ನ.13 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.15 ಕೊನೆಯ ದಿನ. ನ.30ರಂದು ಮತದಾನವಿದೆ. ಡಿ.3ಕ್ಕೆ ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಬರ ಪರಿಹಾರದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ: ಹೆಚ್ ಕೆ ಪಾಟೀಲ್