ಪಾಟ್ನಾ(ಬಿಹಾರ): ಮಹಾತ್ಮ ಗಾಂಧೀಜಿ ಮದ್ಯಪಾನ ವಿರೋಧಿಗಳಾಗಿದ್ದರು. ಅವರ ಮಾತು ಪಾಲಿಸದೇ 'ಮದ್ಯಪಾನ ಮಾಡುವವರು ಮಹಾಪಾಪಿಗಳು ಹಾಗೂ ಅವರು ಭಾರತೀಯರಲ್ಲ' ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಿದ್ದ ಅವರು ಈ ರೀತಿ ಮಾತನಾಡಿದರು.
ಮದ್ಯಪಾನ ಮಾಡುವುದು ತಪ್ಪು ಎಂಬುದು ಗೊತ್ತಿದ್ದರೂ ಸಹ ಸೇವನೆ ಮಾಡ್ತಾರೆ. ಹಾಗಾಗಿ, ಅವರು ಅಯೋಗ್ಯರು ಮತ್ತು ಮಹಾಪಾಪಿಗಳು ಎಂದಿರುವ ನಿತೀಶ್ ಕುಮಾರ್, ಮದ್ಯಪಾನ ಮಾಡುವವರಿಗೆ ಸಾಮರ್ಥ್ಯವಿಲ್ಲ. ಅವರು ಅಸಮರ್ಥ ವ್ಯಕ್ತಿಗಳು ಎಂದರು. ಮದ್ಯ ಸೇವನೆಯಿಂದಾಗುವ ಪರಿಣಾಮಗಳಿಗೆ ಅವರೇ ಹೊಣೆ ಹೊರತು ಸರ್ಕಾರವಲ್ಲ ಎಂದು ಎಚ್ಚರಿಸಿದ್ದಾರೆ.
ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದರ ಮಧ್ಯೆಯೂ ಕೂಡ ಅಲ್ಲಲ್ಲಿ ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ತಯಾರಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪರಿಣಾಮ, ಅನೇಕರು ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ. ವಿಷಕಾರಿ ಮದ್ಯ ಸೇವಿಸಿ ಸಾವನ್ನಪ್ಪುವವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಹೊಣೆಗಾರನಾಗಿ ಮಾಡುವುದು ತಪ್ಪು ಎಂದು ಪ್ರತಿಪಕ್ಷಗಳ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಈಶಾನ್ಯದ 3 ರಾಜ್ಯಗಳಲ್ಲಿ AFSPA ವ್ಯಾಪ್ತಿ ಕಡಿತ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಮದ್ಯಪಾನ ಮಾಡಿ ಬಿಹಾರದಲ್ಲಿ ಸಿಕ್ಕಿಬಿದ್ದರೆ ಅವರನ್ನು ಜೈಲಿಗೆ ಕಳುಹಿಸುವ ಬದಲಿಗೆ ಲಿಕ್ಕರ್ ಮಾಫಿಯಾದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ವಹಿಸುವ ಬಗ್ಗೆ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿತ್ತು.