ಇಂದೋರ್ (ಮಧ್ಯ ಪ್ರದೇಶ): ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ವಿರುದ್ಧ ನೀಡಿದ ಹೇಳಿಕೆಯಿಂದ ಭಾರಿ ವಿವಾದ ಸೃಷ್ಟಿಸಿದ್ದಾರೆ. ನಿತೀಶ ಕುಮಾರ್ ಅವರನ್ನು ವಿದೇಶಿ ಮಹಿಳೆ ಎಂದು ಅವರು ಟೀಕಿಸಿದ್ದಾರೆ.
ನಾನು ವಿದೇಶಗಳಲ್ಲಿ ಸುತ್ತಾಡುವಾಗ, ಅಲ್ಲಿನ ಮಹಿಳೆಯರು ಯಾವಾಗ ಬೇಕಾದಾಗ ತಮ್ಮ ಬಾಯ್ಫ್ರೆಂಡ್ಗಳನ್ನು ಬದಲಾಯಿಸುತ್ತಿರುತ್ತಾರೆ ಎಂದು ಯಾರೋ ಹೇಳಿದ್ದರು. ಬಿಹಾರ ಮುಖ್ಯಮಂತ್ರಿಯೂ ಹಾಗೆಯೇ ಇದ್ದಾರೆ. ಯಾವಾಗ ಯಾರ ಕೈ ಹಿಡಿಯುತ್ತಾರೆ ಅಥವಾ ಯಾರ ಕೈ ಬಿಡುತ್ತಾರೆ ಎಂಬುದು ಅವರಿಗೇ ಗೊತ್ತಿರಲ್ಲ ಎಂದು ವಿಜಯವರ್ಗೀಯ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಮಾಧ್ಯಮದವರೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ.
ನಿತೀಶ್ ಕುಮಾರ್ ಅವರು ಬಿಜೆಪಿಯಿಂದ ಬೇರ್ಪಟ್ಟು ಈ ತಿಂಗಳ ಆರಂಭದಲ್ಲಿ ಆರ್‌ಜೆಡಿ ಮತ್ತು ಇತರ ಪಕ್ಷಗಳೊಂದಿಗೆ ಸರ್ಕಾರ ರಚಿಸಿದ್ದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆರ್‌ಜೆಡಿಯ ತೇಜಸ್ವಿ ಯಾದವ್ ಆಗಸ್ಟ್ 10 ರಂದು ಪ್ರಮಾಣ ವಚನ ಸ್ವೀಕರಿಸಿದರು.
ಬಿಹಾರದ ಮಹಾಮೈತ್ರಿಕೂಟವು ಒಟ್ಟು 163 ಸದಸ್ಯರ ಬಲವನ್ನು ಹೊಂದಿದೆ. ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡಿದ ನಂತರ ಅದರ ಬಲ 164 ಕ್ಕೆ ಏರಿದೆ. ಹೊಸ ಸರ್ಕಾರ ಆಗಸ್ಟ್ 24 ರಂದು ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವ ಸಾಧ್ಯತೆಯಿದೆ.