ಪಾಟ್ನಾ (ಬಿಹಾರ): ಬಿಹಾರದ ಆಡಳಿತಾರೂಢ ಜೆಡಿಯು ಮತ್ತು ಆರ್‌ಜೆಡಿ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರದರ್ಶಿಸುವ ಮತ್ತೊಂದು ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ತಮ್ಮದೇ ಪಕ್ಷದ ಇಬ್ಬರು ಸಚಿವರನ್ನು ಅಧಿಕೃತ ಸಭೆಗೆ ಆಹ್ವಾನಿಸಲಿಲ್ಲ ಎಂದು ವರದಿಯಾಗಿದೆ. ಮುಖ್ಯಮಂತ್ರಿಗಳು ಕೃಷಿ ಮತ್ತು ಸಹಕಾರ ಇಲಾಖೆ ಸಭೆ ಕರೆದಿದ್ದರು. ಆದರೆ, ಕೃಷಿ ಸಚಿವ ಕುಮಾರ್ ಸರ್ವಜೀತ್ ಮತ್ತು ಸಹಕಾರಿ ಸಚಿವ ಸುರೇಂದ್ರ ಪ್ರಸಾದ್ ಯಾದವ್ ಅವರನ್ನು ಸಭೆಗೆ ಆಹ್ವಾನಿಸಿರಲಿಲ್ಲ.
ನಿತೀಶ್ ಕುಮಾರ್ ಅವರು ನೇರವಾಗಿ ಸಹಕಾರ ಇಲಾಖೆ ಕಾರ್ಯದರ್ಶಿ ವಂದನಾ ಪ್ರೇಯಸಿ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿ ಎನ್.ಸರ್ವನ್ ಕುಮಾರ್ ಅವರಿಗೆ ತಮ್ಮ ನಿರ್ದೇಶನಗಳನ್ನು ಅನುಸರಿಸುವಂತೆ ಸೂಚಿಸಿದ್ದರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ಕೋಟಾದಡಿ ನೇಮಕವಾದ ಸಚಿವರು ಇಂಥ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಾಗೆಯೇ ಮಹಾಘಟ ಬಂಧನ್ ಸರ್ಕಾರದ ಅವಧಿಯಲ್ಲಿ, ತೇಜಸ್ವಿ ಯಾದವ್ ಅವರು ಯಾವಾಗಲೂ ಸಭೆಗಳಿಗೆ ಹಾಜರಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಅವರನ್ನು ಸಭೆಗೆ ಆಹ್ವಾನಿಸಲಾಗಿಲ್ಲ.
ಮುಖ್ಯಮಂತ್ರಿಗಳ ವಿರುದ್ಧ ಶಿಖಂಡಿ, ರಾತ್ರಿ ಕಾವಲುಗಾರ, ಭಿಕ್ಷುಕ ಮುಂತಾದ ಅಸಂಸದೀಯ ಪದಗಳನ್ನು ಬಳಸಿದ ಮಾಜಿ ಸಚಿವ ಸುಧಾಕರ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಿತೀಶ್ ಕುಮಾರ್ ಆರ್‌ಜೆಡಿ ಉನ್ನತ ನಾಯಕತ್ವದ ಬಗ್ಗೆ ಆಕ್ರೋಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್‌ಜೆಡಿ ಪಕ್ಷದ ಶಾಸಕ ವಿಜಯ್ ಕುಮಾರ್ ಮಂಡಲ್ ಅವರು ನಿತೀಶ್ ಕುಮಾರ್ ಅವರ ಸಮಾಧಾನ್ ಯಾತ್ರೆಯನ್ನು ಟೀಕಿಸಿರುವ ಬಗ್ಗೆ ಕೂಡ ನಿತೀಶ್ ಅಸಮಾಧಾನಿತರಾಗಿದ್ದಾರೆ. ಅಲ್ಲದೆ, ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್ ಅವರು 'ರಾಮ ಚರಿತ್ ಮಾನಸ್' ವಿರುದ್ಧ ಕಮೆಂಟ್ ಮಾಡಿದ್ದು ಕೋಲಾಹಲ ಸೃಷ್ಟಿಸಿದೆ.
ಮೌನ ಮುರಿದ ಸಿಎಂ: ಮಹಾಕಾವ್ಯ 'ರಾಮಚರಿತಮಾನಸ್' ಕುರಿತು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ವಿವಾದಾತ್ಮಕ ಹೇಳಿಕೆಯ ಕುರಿತು ಆರ್‌ಜೆಡಿ ಮತ್ತು ಜೆಡಿಯು ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಮೌನ ಮುರಿದಿದ್ದು, ಯಾರೂ ಇನ್ನೊಬ್ಬರ ಧರ್ಮದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ನನ್ನ ಅಭಿಪ್ರಾಯದಂತೆ ಯಾರ ಧರ್ಮಕ್ಕೂ ಯಾರೂ ಅಡ್ಡಿಪಡಿಸಬಾರದು. ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು. ಪ್ರತಿಯೊಬ್ಬರೂ ತಮ್ಮ ಇಚ್ಛೆಯ ಧರ್ಮವನ್ನು ಅನುಸರಿಸಲು ಸ್ವತಂತ್ರರು. ನಾನು ಈಗಾಗಲೇ ಅವರೊಂದಿಗೆ (ಚಂದ್ರಶೇಖರ್) ಮಾತನಾಡಿದ್ದೇನೆ. ಉಪಮುಖ್ಯಮಂತ್ರಿ (ಆರ್‌ಜೆಡಿ ನಾಯಕ ತೇಜಸ್ವಿ ಯಾದವ್) ಸಹ ಅವರೊಂದಿಗೆ ಮಾತನಾಡಿದ್ದಾರೆ ಎಂದರು.
ರಾಮಚರಿತಮಾನಸ್ ಕುರಿತು ಬಿಹಾರ ಶಿಕ್ಷಣ ಸಚಿವರ ಹೇಳಿಕೆಯನ್ನು ವಿರೋಧಿಸಿ, ಜೆಡಿಯುನ ನೀರಜ್ ಕುಮಾರ್ ಮತ್ತು ಇತರ ನಾಯಕರು ಪಾಟ್ನಾದ ಹನುಮಾನ್ ದೇವಾಲಯದ ಹೊರಗೆ ಹಿಂದೂ ಧಾರ್ಮಿಕ ಪುಸ್ತಕವನ್ನು ಪಠಿಸಿದರು. ಇದಲ್ಲದೆ, ಪ್ರಮುಖ ಕಾಂಗ್ರೆಸ್ ನಾಯಕ ಮತ್ತು ಪ್ರಿಯಾಂಕಾ ವಾದ್ರಾ ಅವರ ರಾಜಕೀಯ ಸಲಹೆಗಾರ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಒಂದು ಹೆಜ್ಜೆ ಮುಂದೆ ಹೋಗಿ ಚಂದ್ರಶೇಖರ್ ವಿರುದ್ಧ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದು, ರಾಜ್ಯ ಶಿಕ್ಷಣ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 'ಮನುಸ್ಮೃತಿ'ಯಂತೆ 'ರಾಮಚರಿತಮಾನಸ'ವನ್ನೂ ಸುಟ್ಟು ಹಾಕಬೇಕು: ಬಿಹಾರ ಶಿಕ್ಷಣ ಸಚಿವ