ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಭಾನುವಾರ ಅವರನ್ನು ಹೈದರಾಬಾದ್‌ನ ಗಚಿ ಬೌಲಿಯ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರು ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ, ಸಿಎಂ ಕೆಸಿಆರ್ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ತಕ್ಷಣ ಮುಖ್ಯಮಂತ್ರಿ ಅವರಿಗೆ ಎಂಡೋಸ್ಕೋಪಿ, ಸಿಟಿ ಸ್ಕ್ಯಾನ್ ಸೇರಿದಂತೆ ಗ್ಯಾಸ್ಟ್ರಿಕ್ ಸಂಬಂಧಿತ ಪರೀಕ್ಷೆಗಳನ್ನು ನಡೆಸಲಾಯಿತು. ಪರೀಕ್ಷೆ ನಂತರ, ಹೊಟ್ಟೆಯಲ್ಲಿ ಸಣ್ಣ ಹುಣ್ಣು ಇರುವುದು ಪತ್ತೆಯಾಗಿದೆ ಎಂದು ಎಐಜಿ ಆಸ್ಪತ್ರೆ ಅಧ್ಯಕ್ಷ ಡಾ. ಡಿ. ನಾಗೇಶ್ವರ್ ರೆಡ್ಡಿ ತಿಳಿಸಿದ್ದಾರೆ.
ಸಿಎಂ ಪತ್ನಿ ಶೋಭಾ ಹಾಗೂ ಮಗಳು ಕೆ ಕವಿತಾ ಅವರು ಕೆಸಿಆರ್ ಅವರೊಂದಿಗೆ ಎಐಜಿ ಆಸ್ಪತ್ರೆಗೆ ತೆರಳಿದ್ದರು. ಕೂಡಲೇ ಆರೋಗ್ಯ ಸಚಿವ ಹರೀಶ್ ರಾವ್, ಪ್ರವಾಸೋದ್ಯಮ ಸಚಿವ ಶ್ರೀನಿವಾಸ್ ಗೌಡ್, ಗಿರಿಜನ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್, ಸರ್ಕಾರಿ ಸಚೇತಕ ಕೌಶಿಕ್ ರೆಡ್ಡಿ ಮತ್ತಿತರರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅವರು ಅಸ್ವಸ್ಥರಾಗುವ ಮುನ್ನ ಕವಿತಾ ದೆಹಲಿಯಿಂದ ಬಂದ ನಂತರ ತಮ್ಮ ತಂದೆಯನ್ನು ಭೇಟಿಯಾಗಲು ಪ್ರಗತಿ ಭವನಕ್ಕೆ ಹೋಗಿದ್ದರು.
ಎಂಎಲ್‌ಸಿ ಕವಿತಾ ಅವರು ಪ್ರಗತಿ ಭವನಕ್ಕೆ ತೆರಳಿ ಶನಿವಾರ ನಡೆದ ಇಡಿ ವಿಚಾರಣೆ ಕುರಿತು ಹಾಗೂ ಇತರ ಮುಖಂಡರ ಜತೆ ಚರ್ಚಿಸಿದ್ದಾರೆ. ಈ ವೇಳೆ ಕೆಸಿಆರ್ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಕವಿತಾ ಅವರು ಎಐಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಎಂ ಅವರು ಅನಾರೋಗ್ಯದ ವಿಚಾರ ತಿಳಿದ ಬಳಿಕ ಬಿಆರ್‌ಎಸ್ ನಾಯಕರು ಮತ್ತು ಮುಖಂಡರಲ್ಲಿ ಆತಂಕ ಮನೆ ಮಾಡಿತು. ಎಐಜಿ ಆಸ್ಪತ್ರೆ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಹಿಂದಿನ ವರ್ಷ ಇದೇ ದಿನ ಮುಖ್ಯಮಂತ್ರಿ ಕೆಸಿಆರ್ ಎಡಗೈ ನೋವಿನಿಂದ ಬಳಲಿ ಅಸ್ವಸ್ಥರಾಗಿದ್ದರು. ಅಗ ಸೋಮಾಜಿಗುಡದ ಯಶೋಧಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ವೇಳೆ ರಕ್ತ ಪರೀಕ್ಷೆ, ಕರೋನರಿ ಆಂಜಿಯೋಗ್ರಾಮ್, ಇಸಿಜಿ, 2ಡಿ ಎಕೋ, ಮೆದುಳು ಮತ್ತು ಬೆನ್ನುಮೂಳೆಯ ಎಂಆರ್‌ಐ ಪರೀಕ್ಷೆಗೆ ಒಳಪಡಿಸಲಾಗಿತ್ತು.
ದೆಹಲಿ ಅಬಕಾರಿ ಹಗರಣದಲ್ಲಿ ಕೆ ಕವಿತಾ ವಿಚಾರಣೆ: ದೆಹಲಿ ಮಾಜಿ ಡಿಸಿಎಂ ಮನಿಶ್ ಸಿಸೋಡಿಯಾ ಬಂಧನದ ಬಳಿಕ ದೆಹಲಿ ಅಬಕಾರಿ ನೀತಿಯ ಅಕ್ರಮ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿತ್ತು.
ಈಗಾಗಲೇ ಈ ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಇಡಿ ಬಂಧಿಸಿದೆ. ದೆಹಲಿ ಮದ್ಯ ಹಗರಣದಲ್ಲಿ ಕವಿತಾ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಇಡಿ ಗಂಭೀರ ಆರೋಪ ಮಾಡಿದೆ.
ವಿಚಾರಣೆ ವೇಳೆ ಇಡಿ ಕವಿತಾ, ಸೌತ್ ಗ್ರೂಪ್ ಉದ್ಯಮಿ ಅರುಣ್ ಪಿಳ್ಳೈ ಸಂಬಂಧ ಹೊಂದಿದ್ದು, ಇದರ ಮೂಲಕ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರಿಗೆ ನೂರಾರು ಕೋಟಿ ಹಣವನ್ನು ನೀಡಿರುವ ಆರೋಪ ಕೇಳಿ ಬಂದಿದೆ. ಅರುಣ್ ಪಿಳ್ಳೈ ಬಂಧನದ ಬೆನ್ನಲ್ಲೇ ಕವಿತಾ ಅವರಿಗೂ ಕೂಡ ಇಡಿ ಸಮನ್ಸ್ ಜಾರಿ ಮಾಡಿತ್ತು. ಇಡಿ ವಿಚಾರಣೆ ಎದುರಿಸಿದ ಬಗ್ಗೆ ಎಂಎಲ್‌ಸಿ ಕವಿತಾ ಅವರು ಶನಿವಾರ ಪ್ರಗತಿ ಭವನಕ್ಕೆ ತೆರಳಿ ಮುಖಂಡರ ಜತೆ ಚರ್ಚಿಸಿದ್ದರು.
ಇದನ್ನೂ ಓದಿ:ವಿಶ್ವದ ಯಾವ ಶಕ್ತಿಯಿಂದಲೂ ಭಾರತದ ಪ್ರಜಾಪ್ರಭುತ್ವ ಪರಂಪರೆಗೆ ಹಾನಿಯಾಗಲ್ಲ: ಪ್ರಧಾನಿ ಮೋದಿ