ಹೈದರಾಬಾದ್: ಅಂತಾರಾಷ್ಟ್ರೀಯ ಬೆಳೆ ಸಂಶೋಧನೆ ಸಂಸ್ಥೆಯ 50ನೇ ವಾರ್ಷಿಕೋತ್ಸವ ಹಾಗೂ ರಾಮಾನುಜರ ಪ್ರತಿಮೆ ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ಗೆ ಅಗಮಿಸಿದ್ದು, ಅವರನ್ನ ಬರಮಾಡಿಕೊಳ್ಳಲು ಮುಖ್ಯಮಂತ್ರಿ ಹೋಗದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಹೈದರಾಬಾದ್ ಏರ್ಪೋರ್ಟ್ಗೆ ನಮೋ ಆಗಮಿಸುತ್ತಿದ್ದಂತೆ ಅವರನ್ನ ಸ್ವಾಗತ ಮಾಡಿಕೊಳ್ಳಲು ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್, ಡಿಜಿಪಿ ಮಹೇಂದರ್ ರೆಡ್ಡಿ ಸೇರಿದಂತೆ ಅನೇಕರು ಶಂಶಾಬಾದ್ ಏರ್ಪೋರ್ಟ್ಗೆ ತೆರಳಿದ್ದರು. ಆದರೆ, ಮುಖ್ಯಮಂತ್ರಿ ಕೆಸಿಆರ್ ಮಾತ್ರ ಅಲ್ಲಿಗೆ ಹೋಗಿರಲಿಲ್ಲ.
ಸಿಎಂ ಕೆಸಿಆರ್ಗೆ ಜ್ವರ: ಶಿಷ್ಟಾಚಾರದ ಪ್ರಕಾರ, ಪ್ರಧಾನಿ ಮೋದಿ ಅವರನ್ನ ಬರಮಾಡಿಕೊಳ್ಳಲು ಹಾಗೂ ಆಯೋಜನೆಗೊಂಡಿರುವ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಮುಖ್ಯಮಂತ್ರಿ ಭಾಗಿಯಾಗಬೇಕಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಸಿಎಂ ಕೆಸಿಆರ್ ಭಾಗಿಯಾಗುವ ಕಾರ್ಯಕ್ರಮ ರದ್ಧುಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಸಿಆರ್, ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಕಾರಣಕ್ಕಾಗಿ ಅವರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಜ್ವರದಿಂದ ಬಳಲುತ್ತಿರುವ ಅವರು ಇದೀಗ ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಜ್ವರ ಕಡಿಮೆಯಾದರೆ, ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಕೇರಳ : ನಾಗರಹಾವು ಕಡಿತಕ್ಕೊಳಗಾದ ಖ್ಯಾತ ಉರಗ ತಜ್ಞ ವಾವಾ ಸುರೇಶ್ ಆರೋಗ್ಯದಲ್ಲಿ ಚೇತರಿಕೆ
ಕಳೆದ ಕೆಲ ದಿನಗಳ ಹಿಂದೆ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದ ಕೆಸಿಆರ್, ಮೋದಿ ಚುನಾವಣೆಗೋಸ್ಕರ ಉಡುಗೆ ತೊಡುತ್ತಾರೆ. ಈ ಗಿಮಿಕ್ಗಳಿಂದ ದೇಶಕ್ಕೆ ಏನು ಸಿಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ನಾಯಕತ್ವ ಬದಲಾವಣೆಯಾಗುವ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.