ಹೈದರಾಬಾದ್: ಮರಿಯಮ್ಮ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ಕೆಸಿಆರ್, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದ ಸೂಕ್ತ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಗತ್ಯವಿದ್ದರೆ ಅವರನ್ನು ಕೆಲಸದಿಂದ ವಜಾಗೊಳಿಸುವಂತೆ ಆದೇಶ ನೀಡಿದ್ದಾರೆ.
ಮರಿಯಮ್ಮ ಲಾಕಪ್ ಡೆತ್ ಬಗ್ಗೆ ಸಿಎಂ ಕೆ. ಚಂದ್ರಶೇಖರ್ ರಾವ್ ವಿಷಾದ ವ್ಯಕ್ತಪಡಿಸಿದ್ದು, ಮೃತ ಮರಿಯಮ್ಮನ ಮಗನಿಗೆ ಸರ್ಕಾರಿ ಉದ್ಯೋಗ ಮತ್ತು ಮನೆ ನೀಡುವ ಭರವಸೆ ನೀಡಿದ್ದಾರೆ. ಜೊತೆಗೆ 15 ಲಕ್ಷ ಪರಿಹಾರಧನವನ್ನು ಘೋಷಿಸಿದ್ದಾರೆ. ಮರಿಯಮ್ಮನವರ ಇಬ್ಬರು ಹೆಣ್ಣುಮಕ್ಕಳಿಗೆ ತಲಾ 10 ಲಕ್ಷ ರೂ. ನೀಡುವುದಾಗಿಯೂ ಘೋಷಿಸಿದ್ದಾರೆ.
ಈ ಘೋಷಣೆಗೂ ಮುನ್ನ ಶ್ರೀಧರ್ ಬಾಬು, ರಾಜಾ ಗೋಪಾಲ್ ರೆಡ್ಡಿ, ಜಗ್ಗರೆಡ್ಡಿ ಸೇರಿ ಇನ್ನೂ ಅನೇಕ ರಾಜ್ಯ ಕಾಂಗ್ರೆಸ್ ನಾಯಕರು ಪ್ರಗತಿ ಭವನದಲ್ಲಿ ಸಿಎಂ ಕೆಸಿಆರ್ ಅವರನ್ನು ಭೇಟಿ ಮಾಡಿ, ಮರಿಯಮ್ಮನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು.
ನಾಗರಿಕ ಹಕ್ಕುಗಳ ಆಯೋಗ ಸಹ ಮರಿಯಮ್ಮ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದೆ.ಲಾಕಪ್ ಡೆತ್ ಪ್ರಕರಣ ಸಂಬಂಧ ಇಂದು ಪೊಲೀಸರು ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದಾರೆ. ಅಡಗುಡೂರ್ ಪೊಲೀಸ್ ಠಾಣೆಯಲ್ಲಿ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೋರ್ಟ್ಗೆ ಹೇಳಿದ್ದು, ಇದಕ್ಕೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಸಿಎಂ ಕೆಸಿಆರ್ ಡಿಜಿಪಿ ಮಹೇಂದರ್ ರೆಡ್ಡಿ ಅವರಿಗೆ ಚಿಂತಕಣಿ ಮಂಡಲಕ್ಕೆ ಹೋಗಿ ಪ್ರಕರಣದ ಸಂಪೂರ್ಣ ವಿವರಗಳನ್ನು ತನಿಖೆ ಮಾಡಲು ಆದೇಶಿಸಿದ್ದಾರೆ ಮತ್ತು ಮರಿಯಮ್ಮ ಕುಟುಂಬವನ್ನು ಭೇಟಿ ಮಾಡುವಂತೆ ಡಿಜಿಪಿಗೆ ಸೂಚಿಸಿದ್ದಾರೆ.
ಮರಿಯಮ್ಮ ಖಮ್ಮಾಮ್ ಜಿಲ್ಲೆಯ ಕೋಮತ್ಲಗುಡ ಗ್ರಾಮದ ನಿವಾಸಿಯಾಗಿದ್ದು, 2 ತಿಂಗಳ ಹಿಂದೆ ಗೋವಿಂದಪುರಂನಲ್ಲಿ ಚರ್ಚ್ ಫಾದರ್ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದರು. ದರೋಡೆ ಪ್ರಕರಣವೊಂದರಲ್ಲಿ ಯಾದಾದ್ರಿ ಭುವನಗಿರಿ ಜಿಲ್ಲೆಯ ಅಡಗುಡೂರ್ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ಕಸ್ಟಡಿಯಲ್ಲಿಯೇ ಮರಿಯಮ್ಮ ಮೃತಪಟ್ಟಿದ್ದಾರೆ.