ಹೈದರಾಬಾದ್: ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡನಾಡಿನಿಂದ ಬಂದು ಹೈದರಾಬಾದಿನಲ್ಲಿ ನೆಲೆಸಿದ್ದರೂ ಕನ್ನಡದ ಕಂಪು ಹಾಗೂ ಭಾಷೆಯನ್ನು ಬಿಟ್ಟಿಲ್ಲ. ನಮಗಿಂತ ಅಚ್ಚುಕಟ್ಟಿನ ಕನ್ನಡದ ಪ್ರೇಮಿಗಳು ನೀವು ಎಂದು ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.
ಶನಿವಾರ ಕಾಚಿಗುಡದ ಲಿಂಗಂಪಲ್ಲಿಯಲ್ಲಿರುವ ನೃಪತುಂಗ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಹೈದರಾಬಾದ್ನಲ್ಲಿರುವ ಕನ್ನಡ ಸಂಘಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ನೆರವು ನೀಡುತ್ತೇವೆ. ನಿಮ್ಮ ಆಗುಹೋಗುಗಳಲ್ಲಿ ಸರ್ಕಾರ ನಿಮ್ಮೊಂದಿಗಿದೆ. ನಿಮ್ಮ ಸಂಸ್ಥೆಗಳಿಗೆ, ಸಂಘಟನೆಗಳಿಗೆ ಸರ್ಕಾರ ನೆರವಾಗುತ್ತದೆ.

ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಎಲ್ಲಾ ಕಾರ್ಯಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ಸೊಲ್ಲಾಪುರ, ಗೋವಾ, ಕಾಸರಗೋಡುಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ನೀಡಲಾಗಿದ್ದು, ಅಂತೆಯೇ ಇಲ್ಲಿಯೂ ಅನುದಾನ ಒದಗಿಸಲಾಗುವುದು.
ಗಡಿಭಾಗದ ಹಲವಾರು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದೆ. ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಅದರ ಅಧ್ಯಕ್ಷರನ್ನು ಇಲ್ಲಿಗೆ ಕಳುಹಿಸಿಕೊಟ್ಟು ಅಗತ್ಯವಿರುವ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಪೌರ ಕಾರ್ಮಿಕರು ಇಂದು ಮುಷ್ಕರ ಹಿಂಪಡೆಯುತ್ತಾರೆ: ಸಿಎಂ ಬೊಮ್ಮಾಯಿ