ಪ್ರತಾಪ್‌ಗಢ (ರಾಜಸ್ಥಾನ) : ರಾಜಸ್ಥಾನದಲ್ಲಿ ಪತಿ ಮತ್ತು ಕುಟುಂಬ ಗರ್ಭಿಣಿಯನ್ನು ಹೀನಾಯವಾಗಿ ಥಳಿಸಿ, ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದಿಂದ 10 ಲಕ್ಷ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಲಾಗಿದೆ.
ಈ ಬಗ್ಗೆ ಶನಿವಾರ ಮಾಹಿತಿ ನೀಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಪ್ರತಾಪ್‌ಗಢ ಜಿಲ್ಲೆಯಲ್ಲಿ ಪತಿ ಮತ್ತು ಅತ್ತೆ ಸೇರಿದಂತೆ ಕುಟುಂಬಸ್ಥರಿಂದ ಥಳಿತಕ್ಕೊಳಗಾಗಿದ್ದ ಮಹಿಳೆಗೆ 10 ಲಕ್ಷ ಪರಿಹಾರ ನೀಡಲಾಗಿದೆ. ಜೊತೆಗೆ ಸರ್ಕಾರಿ ಉದ್ಯೋಗವನ್ನೂ ನೀಡಲಾಗುವುದು. ಆಕೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲಾಗಿದೆ ಎಂದು ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಬರೆದುಕೊಂಡಿದ್ದಾರೆ.
ಹಿಂದಿಯಲ್ಲಿ ಬರೆದುಕೊಂಡಿರುವ ಮಾಹಿತಿಯಲ್ಲಿ ರಾಜಸ್ಥಾನದ ಮಗಳು ತುಂಬಾ ಧೈರ್ಯಶಾಲಿಯಾಗಿದ್ದಾಳೆ. ಅತ್ಯಂತ ಹೀನಾಯ ಮತ್ತು ಕಠಿಣ ಕ್ಷಣಗಳನ್ನು ಬಹಳ ಧೈರ್ಯದಿಂದ ಎದುರಿಸಿದಳು. ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಸಂತ್ರಸ್ತರಿಗೆ ಆರ್ಥಿಕ ನೆರವು ಮತ್ತು ಉದ್ಯೋಗ ಘೋಷಿಸಲಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಪತಿ, ಅತ್ತೆಯಿಂದ ಹೀನಾಯ ಕೃತ್ಯ: ಆಗಸ್ಟ್ 31 ರಂದು ಘಟನೆ ನಡೆದಿದೆ. ನೆರೆ ಮನೆಯವನ ಜೊತೆ ಮಹಿಳೆ ಹೋಗಿದ್ದಾಳೆ ಎಂದು ಆರೋಪಿಸಿ ಆಕೆಯ ಪತಿ, ಅತ್ತೆ ಮತ್ತು ಕುಟುಂಬಸ್ಥರು ಸೇರಿಕೊಂಡು ಹೀನಾಯವಾಗಿ ಥಳಿಸಿ, ವಿವಸ್ತ್ರಗೊಳಿಸಿ ಬೆತ್ತಲೆ ಮೆರವಣಿಗೆ ಮಾಡಿದ್ದರು. ಈ ಅಮಾನವೀಯ ಕೃತ್ಯ ಕ್ಯಾಮೆರಾದಲ್ಲಿ ದಾಖಲಾಗಿತ್ತು. ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಘಟನೆಯ ವಿಡಿಯೋವನ್ನು ಯಾರೂ ಹಂಚಿಕೊಳ್ಳದಂತೆ ಜನರಲ್ಲಿ ಮನವಿ ಮಾಡಿದ್ದಾರೆ.
11 ಜನರ ಬಂಧನ: ಘಟನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಕೇಸ್ಗೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮಹಿಳೆಯ ಪತಿ ಕಾನಾ ಮೀನಾ ಮತ್ತು ಆಕೆಯ ಅತ್ತೆ ನಾಥು ಮೀನಾ ಮತ್ತು ವೆಲಿಯಾ ಮೀನಾ ಸೇರಿದ್ದಾರೆ ಎಂದು ಹೇಳಿದ್ದಾರೆ.
ಸಂತ್ರಸ್ತೆಯು ನೆರೆಮನೆಯವನ ಜೊತೆ ಹೋಗಿದ್ದಳು ಎಂಬ ಕಾರಣಕ್ಕಾಗಿ ಗಂಡನ ಕುಟುಂಬಸ್ಥರು ಆಕೆಯ ಜೊತೆಗೆ ಹೀನಾಯವಾಗಿ ನಡೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆಕೆಯನ್ನು ಥಳಿಸಿ ಬೆತ್ತಲು ಮೆರವಣಿಗೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ಮಾಡುವಾಗ ಹೊಟ್ಟೆಯಲ್ಲಿ 2 ಕತ್ತರಿ ಬಿಟ್ಟ ಕೇಸ್.. ಆರೋಪಪಟ್ಟಿ ಸಲ್ಲಿಕೆ ಬಳಿಕ 104 ದಿನಗಳ ಧರಣಿ ಕೈಬಿಟ್ಟ ಮಹಿಳೆ