ಜೈಪುರ (ರಾಜಸ್ಥಾನ): ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ಹೇಳಿಕೆ ಸಂಬಂಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಉಚ್ಛ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ನಿಗದಿಪಡಿಸಿದೆ.
ನ್ಯಾಯಾಂಗದ ಬಗ್ಗೆ ಅಶೋಕ್ ಗೆಹ್ಲೋಟ್ ಹೇಳಿಕೆ ಕುರಿತಂತೆ ಮಾಜಿ ನ್ಯಾಯಾಂಗ ಅಧಿಕಾರಿ ಶಿವಚರಣ್ ಗುಪ್ತಾ ಎಂಬವರು ಹೈಕೋರ್ಟ್‌ನಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎ.ಜಿ.ಮಸಿಹ್ ಮತ್ತು ನ್ಯಾಯಮೂರ್ತಿ ಎಂ.ಎಂ.ಶ್ರೀವಾಸ್ತವ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಗೆಹ್ಲೋಟ್ ಪರವಾಗಿ ಹೈಕೋರ್ಟ್‌ನಲ್ಲಿ ವಕೀಲ ಪ್ರತೀಕ್ ಕಸ್ಲಿವಾಲ್ ಉತ್ತರ ದಾಖಲಿಸಿದ್ದಾರೆ. ''ಅನೇಕ ಮಾಜಿ ನ್ಯಾಯಮೂರ್ತಿಗಳು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಇದೇ ಆಧಾರದ ಮೇಲೆಯೇ ಮಾತ್ರ ಹೇಳಿಕೆ ಕೊಟ್ಟಿದ್ದಾರೆ. ಇದು ಅವರ ಸ್ವಂತ ಅಭಿಪ್ರಾಯವಲ್ಲ. ನ್ಯಾಯಾಂಗದ ಬಗ್ಗೆ ಗೆಹ್ಲೋಟ್ ಅವರಿಗೆ ಸಂಪೂರ್ಣವಾದ ಗೌರವವಿದೆ. ಅವರ ಹೇಳಿಕೆಯಿಂದ ನ್ಯಾಯಾಂಗಕ್ಕೆ ನೋವಾಗಿದ್ದರೆ, ಅದಕ್ಕಾಗಿ ಅವರು ಬೇಷರತ್ ಕ್ಷಮೆ ಯಾಚಿಸುತ್ತಾರೆ'' ಎಂದು ವಕೀಲರು ತಿಳಿಸಿದರು.
ಪಿಐಎಲ್‌ನಲ್ಲಿರುವ ದೂರೇನು?: ಶಿವಚರಣ್ ಗುಪ್ತಾ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನ್ಯಾಯಾಂಗದ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿದ್ದಾರೆ. ನ್ಯಾಯಾಂಗದಲ್ಲಿ ಗಂಭೀರವಾದ ಭ್ರಷ್ಟಾಚಾರ ಆರೋಪ ಮಾಡಿರುವ ಸಿಎಂ, ನ್ಯಾಯಾಲಯದ ತೀರ್ಪನ್ನು ವಕೀಲರೇ ಬರೆಯುತ್ತಾರೆ. ಅವರು ಏನು ಬರೆಯುತ್ತಾರೋ ಅದೇ ನಿರ್ಧಾರವಾಗಿ ಹೊರಬರುತ್ತದೆ ಎಂದು ಕೇಳಲ್ಪಟ್ಟಿದ್ದೇನೆ. ಕೆಳ ಹಂತದ ಅಥವಾ ಉನ್ನತ ನ್ಯಾಯಾಂಗವೇ ಆಗಿರಲಿ, ಇದು ಗಂಭೀರವಾದ ವಿಷಯ. ಈ ನಿಟ್ಟಿನಲ್ಲಿ ದೇಶವಾಸಿಗಳು ಯೋಚಿಸಬೇಕು ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆಯು ನ್ಯಾಯಾಂಗದ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಉಲ್ಲೇಖಿಸಲಾಗಿದೆ.
ಮುಂದುವರೆದು, ಗೆಹ್ಲೋಟ್ ಅವರು ನ್ಯಾಯಾಂಗ ಅಧಿಕಾರಿಗಳನ್ನು ಮಾತ್ರವಲ್ಲದೆ ವಕೀಲರನ್ನೂ ಅವಮಾನಿಸುವ ರೀತಿ ಹೇಳಿಕೆ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಹೀಗಾಗಿ, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸಿಎಂ ವಿರುದ್ಧ ನ್ಯಾಯಾಂಗ ನಿಂದನೆಗಾಗಿ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅಡಿ ಕ್ರಮ ಕೈಗೊಳ್ಳಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಬಿಹಾರದ ಜಾತಿಗಣತಿ ವರದಿ ಸಿಂಧುವೇ?: ಸುಪ್ರೀಂ ಕೋರ್ಟ್‌ನಲ್ಲಿ ಅಕ್ಟೋಬರ್ 6ರಂದು ವಿಚಾರಣೆ