ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾದ ಎರಡನೇ ಅಲೆ ಸಂಪೂರ್ಣ ಕಡಿಮೆಯಾಗಿಲ್ಲ. ಆದರೂ ಕೊರೊನಾ ನಿಯಂತ್ರಣಕ್ಕೆ ನಾವು ಕೈಗೊಂಡ ಕ್ರಮಗಳು ಯಶಸ್ವಿಯಾಗುತ್ತಿವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಮಧ್ಯೆ ಸಂಭವನೀಯ ಮೂರನೇ ಅಲೆ ನಿಯಂತ್ರಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. 6 ಸಾವಿರ ಸಿಲಿಂಡರ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆಮ್ಲಜನಕದ ಕೊರತೆಯಿಂದ ರಾಜ್ಯದಲ್ಲಿ ಅನೇಕರು ಮೃತಪಟ್ಟಿದ್ದಾರೆ. ಈ ಘಟನೆಗಳಿಂದ ಪಾಠ ಕಲಿಯುತ್ತ ದೆಹಲಿ ಸರ್ಕಾರ ಮುಂದಿನ ಹೆಜ್ಜೆಯನ್ನು ಇಡುತ್ತಿದೆ ಎಂದಿದ್ದಾರೆ.
ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕದ ಸಾಂದ್ರಕಗಳನ್ನು ಖರೀದಿಸುತ್ತಿದೆ. ಇದಕ್ಕೆ ಅನೇಕ ಖಾಸಗಿ ಕಂಪನಿಗಳು ಕೈ ಜೋಡಿಸಿವೆ. ಜೊತೆಗೆ ಭಾರತ ಸರ್ಕಾರ, ಸರ್ಕಾರದ ವಿದೇಶಾಂಗ ಸಚಿವಾಲಯ ಮತ್ತು ಚೀನಾದ ಭಾರತೀಯ ರಾಯಭಾರ ಕಚೇರಿಯ ಸಹಕಾರಕ್ಕೆ ಧನ್ಯವಾದಗಳು ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.