ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ) : ಕೆಲ ದಿನಗಳಿಂದ ಶಾಂತವಾಗಿದ್ದ ಜಮ್ಮು ಕಾಶ್ಮೀರದಲ್ಲಿ ಮತ್ತೆ ಅಶಾಂತಿ ಮೂಡಿಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿರುವ ಸುಳಿವು ಸೇನೆಗೆ ಸಿಕ್ಕಿದೆ. ಹೀಗಾಗಿ ಕೋಕರ್ನಾಗ್ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ಆರಂಭಿಸಿದೆ. ಒಂದೊಂದು ಮನೆಯನ್ನು ಸೇನೆ ಮತ್ತು ಅರೆಸೇನಾ ಪಡೆಯ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಒಳ ಬರುವ ಮತ್ತು ಹೊರ ಹೋಗುವ ಎಲ್ಲ ಜನರನ್ನು ತಪಾಸಣೆ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 17 ರಂದು, ರಜೌರಿಯ ಗಡಿ ಜಿಲ್ಲೆಯ ಬುಧಾಲ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಗಳು ಆ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಈ ವೇಳೆ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಉಗ್ರ ಹತನಾಗಿದ್ದನು.
ಎರಡು ತಿಂಗಳ ಹಿಂದೆ ಗಡೋಲ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿತ್ತು. ಈ ಸಂದರ್ಭದಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಮತ್ತು ಮೇಜರ್ ಆಶಿಶ್ ದುಚಕ್ ಮತ್ತು 19 ರಾಷ್ಟ್ರೀಯ ರೈಫಲ್ಸ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದರು.
ಈ ವರ್ಷ ಜಮ್ಮು ಪ್ರದೇಶದಲ್ಲಿ 14 ಭದ್ರತಾ ಸಿಬ್ಬಂದಿ ಹುತಾತ್ಮ: ಈ ವರ್ಷ ಜಮ್ಮುವಿನ ಮೂರು ಜಿಲ್ಲೆಗಳಲ್ಲಿ 14 ಭದ್ರತಾ ಸಿಬ್ಬಂದಿ ಮತ್ತು 25 ಭಯೋತ್ಪಾದಕರು ಸೇರಿದಂತೆ 46 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಹುತಾತ್ಮರಾದ ಯೋಧರಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ಮೂವರು ಸೇನಾ ಅಧಿಕಾರಿಗಳು ಸೇರಿದ್ದಾರೆ. ಅವರು ರಜೌರಿ ಜಿಲ್ಲೆಯ ಬಾಜಿಮಾಲ್ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರರ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ : ಉಗ್ರರ ವಿರುದ್ಧದ ಹೋರಾಟದಲ್ಲಿ ಮಂಗಳೂರಿನ ಯೋಧ ಕ್ಯಾ.ಎಂ.ವಿ.ಪ್ರಾಂಜಲ್ ಹುತಾತ್ಮ