ಕಿಶ್ತ್ವಾರ್ (ಜಮ್ಮುಮತ್ತು ಕಾಶ್ಮೀರ): ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿರುವ ಮೇಘ ಸ್ಫೋಟದಿಂದಾಗಿ ಉಂಟಾಗಿದ್ದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಪೈಕಿ ಐವರ ಮೃತದೇಹ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಡಚನ್ ತಾಲೂಕಿನ ಕೊಂಜಾರ್ ಗ್ರಾಮದಲ್ಲಿ ಉಂಟಾದ ಮೇಘ ಸ್ಫೋಟದಲ್ಲಿ ಸುಮಾರು 40 ಮಂದಿ ನಾಪತ್ತೆಯಾಗಿರಬಹುದು ಎಂದು ಶಂಕಿಸಲಾಗಿದ್ದು, ಎಸ್ಡಿಆರ್ಎಫ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಮಾತನಾಡಿರುವ ಜಿಲ್ಲಾ ಅಭಿವೃದ್ಧಿ ಆಯುಕ್ತ ಅಶೋಕ್ ಕುಮಾರ್ ಶರ್ಮಾ, ಈವರೆಗೆ ಐವರ ಮೃತದೇಹಗಳ ಪತ್ತೆಮಾಡಲಾಗಿದೆ. ಘಟನೆಯಲ್ಲಿ ಒಟ್ಟು 6 ಮನೆಗಳು ಕೊಚ್ಚಿಹೋಗಿದ್ದವು. ಈಗ ಪತ್ತೆಯಾಗಿರುವ 5 ಮೃತದೇಹಗಳ ಪೈಕಿ ಎರಡು ಮಹಿಳೆಯರದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಿಶ್ತ್ವಾರ್ ಜಿಲ್ಲೆಯಲ್ಲಿ ಉಂಟಾದ ಘಟನಾ ಸ್ಥಳಕ್ಕೆ ಒಂದು ಎಸ್ಡಿಆರ್ಎಫ್ ಹಾಗೂ ದೋಡಾ ಮತ್ತು ಉದಂಪೂರ್ ಜಿಲ್ಲೆಗಳಿಗೆ ಇನ್ನೆರಡು ತಂಡ ಕಳುಹಿಸಲಾಗಿದೆ. ಹವಾಮಾನ ಸುಧಾರಣೆಯ ಬಳಿಕ ಇನ್ನೆರಡು ತಂಡಗಳು ಏರ್ಲಿಫ್ಟ್ ಆಗಲಿದೆ. ಸ್ಥಳದಲ್ಲಿದ್ದ ಸುಮಾರು 60 ಕುಟುಂಬಗಳನ್ನ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ಹಿಮಾಚಲ ಪ್ರದೇಶದಲ್ಲಿ cloudburst: ಓರ್ವ ಸಾವು, 10 ಮಂದಿ ನಾಪತ್ತೆ!