ಚತ್ರಾ (ಜಾರ್ಖಂಡ್): ದೇಶದಲ್ಲಿ ಕಲ್ಲಿದ್ದಲು ಕೊರತೆ ಬಗ್ಗೆ ಮಾಧ್ಯಮಗಳ ವರದಿಯ ಬೆನ್ನಲ್ಲೇ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಇಂದು ಕೆಲ ಕಲ್ಲಿದ್ದಲು ಗಣಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಮುಂಗಾರು ಮಳೆಯಿಂದ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದ ಕೆಲವು ಗಣಿಗಳನ್ನು ಮುಚ್ಚಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಪಿಪರ್‌ವಾರ್‌ನಲ್ಲಿರುವ ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ (ಸಿಸಿಎಲ್)ನ ಅಶೋಕ ಗಣಿಗೆ ಭೇಟಿ ನೀಡಿದ್ದ ಸಚಿವರು, ದೇಶದ ವಿದ್ಯುತ್ ಸ್ಥಾವರಗಳು ಅಗತ್ಯ ಪ್ರಮಾಣದ ಕಲ್ಲಿದ್ದಲನ್ನು ಪಡೆಯುವುದು ಮುಂದುವರಿಯುತ್ತದೆ. ನಾವು ಈಗ ಸುಧಾರಣೆಯನ್ನು ನೋಡುತ್ತಿದ್ದೇವೆ ಎಂದಿದ್ದಾರೆ.
ನಾವು ದಿನಕ್ಕೆ ಎರಡು ಮಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸಬಹುದು. ಹೆಚ್ಚು ಕಲ್ಲಿದ್ದಲನ್ನು ಉತ್ಪಾದಿಸುವ ಅಗತ್ಯವೂ ಇದೆ. ಮುಂಗಾರು ಮಳೆಯಿಂದಾಗಿ ಕೆಲವು ಕಲ್ಲಿದ್ದಲು ಗಣಿಗಳನ್ನು ಮುಚ್ಚಲಾಗಿದೆ. ಇತರ ಕೆಲವು ಜಲಾವೃತಗೊಂಡವು ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಅಡಚಣೆ ಉಂಟಾಯಿತು. ಜಿಲ್ಲಾಡಳಿತ ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಲ್ಲಿದ್ದಲು ಗಣಿಗಾರಿಕೆಗಳಿಗೆ ಭೇಟಿ ನೀಡಿದ್ದ ಸಚಿವ ಪ್ರಹ್ಲಾದ್ ಜೋಶಿ ಸಿಸಿಎಲ್ ಹಾಗೂ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್-ಇಸಿಎಲ್ ಅಧಿಕಾರಿಗಳೊಂದಿಗೆ ಸದ್ಯದ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದ್ದಾರೆ.