ಬೆಂಗಳೂರು: ರೈತರ ಪ್ರತಿಭಟನೆಗೆ ಸಂಬಂಧಿಸಿದ 'ಟೂಲ್ ಕಿಟ್' ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಆರೋಪದ ಮೇಲೆ ಬಂಧನಕ್ಕೊಳಗಾದ ಪರಿಸರ ಹೋರಾಟಗಾರ್ತಿ ದಿಶಾ ರವಿ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ತಿಹಾರ್ ಜೈಲಿನಲ್ಲಿದ್ದಾಗ, ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ, ಪ್ರತಿ ಸೆಕೆಂಡಿನ ಬಗ್ಗೆ ನನಗೆ ಅರಿವಿತ್ತು. ನನ್ನನ್ನು ಸೆಲ್ನಲ್ಲಿ ಕೂಡಿ ಹಾಕಿ ಬೀಗ ಹಾಕಿದರು. ಆದರೆ ಆಗ ನನಗೆ, ಭೂಮಿಯ ಉಳಿವಿಗಾಗಿ ಬೇಕಾದ ಅತ್ಯಂತ ಅಮೂಲ್ಯ ವಿಷಯಗಳ ಬಗ್ಗೆ ಯೋಚಿಸುವುದು ಅಪರಾಧವೇ ಎಂದೆನಿಸಿ ಅಚ್ಚರಿಯಾಯಿತು." ಎಂದು ಹೇಳಿದ್ದಾರೆ.
ರೈತರಾಗಿದ್ದ ನನ್ನ ಅಜ್ಜಿ ಮತ್ತು ತಾತ ನಾನು ಪರಿಸರ ಹೋರಾಟಗಾರ್ತಿಯಾಗಲು ಪ್ರೇರಣೆಯಾಗಿದ್ದರು. ನನ್ನ ಸ್ವಾಯತ್ತೆಯನ್ನು ಉಲ್ಲಂಘಿಸಲಾಗಿದ್ದು, ಮಾಧ್ಯಮಗಳು ಟಿಆರ್ಪಿಗಾಗಿ ನನ್ನ ಚಿತ್ರಗಳನ್ನು ಪದೇಪದೆ ತೋರಿಸಿ ನನ್ನ ಚಟುವಟಿಕೆಗಳು ಅಪರಾಧಿ ಎಂದು ಘೋಷಿಸಿದ್ದವು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: "ಶೀಘ್ರವೇ ತಾಜ್ ಮಹಲ್ ಆಗಲಿದೆ ರಾಮಮಹಲ್": ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ
ಇದೇ ವೇಳೆ ತನ್ನ ಬೆಂಬಲಕ್ಕೆ ನಿಂತ ಮತ್ತು ಕಾನೂನು ಹೋರಾಟಕ್ಕೆ ಸಹರಿಸಿದ ಎಲ್ಲರಿಗೂ ದಿಶಾ ರವಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್’ ಅನ್ನು ಸಿದ್ಧಪಡಿಸಿ, ಅದನ್ನು ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಕಳುಹಿಸಿದ ಆರೋಪದ ಮೇಲೆ ದಿಶಾ ರವಿ ಅವರನ್ನು ಫೆಬ್ರವರಿ 13 ರಂದು ಬಂಧಿಸಲಾಗಿತ್ತು.