ನವದಹೆಲಿ: ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಮನೆಗೆ ಬೆಳಕಾಗಬೇಕು, ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬದುಕಬೇಕು ಎಂಬುದು ಎಲ್ಲಾ ಪೋಷಕರ ಕನಸಾಗಿರುತ್ತೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿನ ಕೆಲ ಪ್ರಕರಣಗಳು ಪೋಷಕರ ನಿದ್ದೆಗೆಡಿಸಿವೆ. ಇದಕ್ಕೆ ಪ್ರಮುಖ ಕಾರಣ ಹೆಚ್ಚಿನ ಕೇಸ್ಗಳಲ್ಲಿ ಬಾಲಾಪರಾಧಿಗಳ ಸಂಖ್ಯೆ ಹೆಚ್ಚಿದೆ ಎನ್ನುವುದಾಗಿದೆ. ಇದಕ್ಕೆ ಸಾಕ್ಷಿ ಎಂಬಂತ ಘಟನೆಯೊಂದು ನಗರದಲ್ಲಿ ನಡೆದಿದೆ.
ಹೌದು, ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಗುಂಪುಗಳೆರಡರ ನಡುವೆ ನಡೆದ ಜಗಳದಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಇಲ್ಲಿಯ ಓಖ್ಲಾ ಪ್ರದೇಶದಲ್ಲಿ ಸೋಮವಾರ ನಡೆದಿದೆ. ಓಖ್ಲಾ 2ನೇ ಹಂತದ ಜೆಜೆ ಕ್ಯಾಂಪ್ ನಿವಾಸಿ ಹಾಗೂ ಕಲ್ಕಾಜಿ ಶಾಲೆಯ 18 ವರ್ಷದ ವಿದ್ಯಾರ್ಥಿ ಘಟನೆಯಲ್ಲಿ ಮೃತ ಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಂಸರಾಜ್ ಸೇಥಿ ಉದ್ಯಾನದ ಬಳಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು, ಈ ವೇಳೆ ಕಲ್ಕಾಜಿ ಶಾಲೆಯ ವಿದ್ಯಾರ್ಥಿಯ ಎದೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಕೂಡಲೇ ಸ್ಥಳೀಯ ಪೂರ್ಣಿಮಾ ಸೇಥಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಘಟನೆ ದಿ.30 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೇ ಸ್ಥಳೀಯರಿಂದ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇನ್ನು, ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊಲೆ ಮತ್ತು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಸೇರಿದಂತೆ ಬಾಲಾಪರಾಧಿಗಳು ಭಾಗಿಯಾಗುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ದ್ವಾರಕದಲ್ಲೂ ವಿದ್ಯಾರ್ಥಿ ಹತ್ಯೆ: ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ವಾಯುವ್ಯ ದೆಹಲಿಯಲ್ಲಿ 10ನೇ ತರಗತಿಯ 17 ವರ್ಷದ ವಿದ್ಯಾರ್ಥಿಯನ್ನು ಶಾಲೆಯ ಹೊರಗೆ ಕೊಂದು ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಹತ್ಯಗೀಡಾದ ವಿದ್ಯಾರ್ಥಿಯ ಸಹಪಾಠಿಗಳು ಸೇರಿದಂತೆ 7 ಬಾಲಾಪರಾಧಿಗಳು ಈ ಕೃತ್ಯದಲ್ಲಿ ಭಾಗಿಯಾಗಿ ವಿದ್ಯಾರ್ಥಿಯ ಹತ್ಯೆ ಮಾಡಿದ್ದರು. ಇನ್ನು, ಮಾರ್ಚ್ 2022ರಲ್ಲಿ ದ್ವಾರಕದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಅಕ್ಷಯ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ನಡುವೆ ನಡೆದಿದ್ದ ಜಗಳದಲ್ಲಿ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನು.
ರಾಷ್ಟ್ರ ರಾಜಧಾನಿಯಲ್ಲಿ ಬಾಲಾಪರಾಧಿಗಳ ಸಂಖ್ಯೆ ಹೆಚ್ಚಳ: ಇನ್ನು, ರಾಷ್ಟ್ರ ರಾಜಧಾನಿಯಲ್ಲಿ ಬಾಲಾಪರಾಧಿಗಳ ವಿರುದ್ಧ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ ಎಂದು ಪೊಲೀಸ್ ಅಂಕಿ ಅಂಶದಿಂದ ತಿಳಿದು ಬಂದಿದೆ. 2021 ರಲ್ಲಿ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಾಲಪರಾಧಿಗಳ ಸಂಖ್ಯೆ ಒಟ್ಟು 3129 ಆಗಿದ್ದು, ಆ ಪೈಕಿ 2643 ಬಾಲಾಪರಾಧಿಗಳು ದೆಹಲಿಯವರೇ ಆಗಿದ್ದಾರೆ. ಮತ್ತೊಂದೆಡೆ ರಾಜಸ್ಥಾನದಲ್ಲೂ 2757 ಬಾಲಾಪರಾಧಿಗಳ ಪ್ರಕರಣ ದಾಖಲಾಗಿದ್ದು, ತಮಿಳುನಾಡಿನಲ್ಲಿ 2212 ಪ್ರಕಣಗಳು ದಾಖಲಾಗಿವೆ ಎಂದು ಪೊಲೀಸ್ ಡೇಟಾದಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ಯುವತಿಯ ಬರ್ಬರ ಹತ್ಯೆ