ಮುಂಬೈ(ಮಹಾರಾಷ್ಟ್ರ): ಪುಣೆಯ 43 ವರ್ಷದ ವ್ಯಕ್ತಿ ಮತ್ತು ಅವರ ಪುತ್ರ ಇಬ್ಬರೂ ಈ ವರ್ಷ 10ನೇ ತರಗತಿ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು. ನಿನ್ನೆ ಫಲಿತಾಂಶ ಪ್ರಕಟಗೊಂಡಿದ್ದು, ತಂದೆ ಪರೀಕ್ಷೆಯಲ್ಲಿ ತೇರ್ಗಡೆಯಾದರೆ, ಮಗ ಅನುತ್ತೀರ್ಣನಾಗಿದ್ದಾನೆ.
ತಂದೆ ಭಾಸ್ಕರ್ ವಾಘಮಾರೆ 30 ವರ್ಷಗಳ ನಂತರ ತಮ್ಮ ಮಗನೊಂದಿಗೆ ಈ ವರ್ಷ ಪರೀಕ್ಷೆ ಬರೆದಿದ್ದರು. ತಮ್ಮ ಕುಟುಂಬದ ಜವಾಬ್ದಾರಿ ಹೊರಲು ಉದ್ಯೋಗಕ್ಕೆ ಸೇರಲೇಬೇಕಿದ್ದ ಕಾರಣಕ್ಕೆ ಅವರು ಅನಿವಾರ್ಯವಾಗಿ 7ನೇ ತರಗತಿಗೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಆದರೆ ಅವರೊಳಗಿನ ಓದುವ ಆಸೆ ಹಾಗೆಯೇ ಉಳಿದಿತ್ತು. ಖಾಸಗಿ ಉದ್ಯೋಗದಲ್ಲಿರುವ ವಾಘಮಾರೆ ಪುಣೆ ನಗರದ ಬಾಬಾಸಾಹೇಬ್ ಅಂಬೇಡ್ಕರ್ ಡಯಾಸ್ ಪ್ಲಾಟ್‌ನ ನಿವಾಸಿ. ವಾಘಮಾರೆ ಪ್ರತಿದಿನ ಕೆಲಸಕ್ಕೆ ಹೋಗಿ ಬಂದ ನಂತರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
"ಕೆಲವು ಸಮಯದಿಂದ ಮತ್ತೆ ಓದು ಪ್ರಾರಂಭಿಸಬೇಕು. ಹೆಚ್ಚು ಜ್ಞಾನ ಗಳಿಸಲು ಸಹಾಯವಾಗುವಂತಹ ಕೋರ್ಸ್ಗಳನ್ನು ಮಾಡುತ್ತಿದ್ದೆ. ಹಾಗಾಗಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದೆ. ನನ್ನ ಮಗ ಕೂಡ ಈ ವರ್ಷ ಪರೀಕ್ಷೆ ಬರೆಯುತ್ತಿದ್ದ ಕಾರಣ ನನಗೆ ಇನ್ನಷ್ಟು ಸಹಾಯವಾಯಿತು. ಈಗ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿದ್ದರೂ ಮಗ ಸಾಹಿಲ್ ಎರಡು ಪತ್ರಿಕೆಗಳಲ್ಲಿ ಫೇಲ್ ಆಗಿದ್ದಕ್ಕೆ ಬೇಸರವಾಗಿದೆ" ಎಂದು ವಾಘಮಾರೆ ಹೇಳಿದರು.
"ನನ್ನ ತಂದೆ ಆಸೆ ಪಟ್ಟದ್ದನ್ನು ಸಾಧಿಸಿದ್ದಾರೆ. ಆ ಬಗ್ಗೆ ನನಗೆ ಬಹಳ ಖುಷಿಯಿದೆ. ನಾನೂ ಕೂಡ ಪೂರಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಉತ್ತೀರ್ಣನಾಗುತ್ತೇನೆ" ಎಂದು ಮಗ ಸಾಹಿಲ್ ತಿಳಿಸಿದ್ದಾನೆ.
ಇದನ್ನೂ ಓದಿ: ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಸೆಕೆಂಡ್ ಟಾಪರ್.. ಮುಂದಿನ ಶಿಕ್ಷಣಕ್ಕಾಗಿ ಕೂಲಿ ಕೆಲಸಕ್ಕೆ ಗುಳೇ ಹೋಗಿರೋ ವಿದ್ಯಾರ್ಥಿ..