ಭುವನೇಶ್ವರ್: ಚಂದ್ರಗ್ರಹಣದ ಸಂದರ್ಭದಲ್ಲಿ ಇರುವ ಮೌಢ್ಯಗಳನ್ನು ವಿರೋಧಿಸಿ ಮಂಗಳವಾರ ವಿಚಾರವಾದಿಗಳು ಬಿರಿಯಾನಿ ಔತಣಕೂಟ ಆಯೋಜಿಸಿದ್ದರು. ಈ ಸಂಬಂಧ ಭುವನೇಶ್ವರ ಮತ್ತು ಬೆರ್ಹಾಂಪುರದಲ್ಲಿ ವಿಚಾರವಾದಿಗಳು ಮತ್ತು ಧಾರ್ಮಿಕವಾದಿಗಳ ನಡುವೆ ಘರ್ಷಣೆ ನಡೆದಿದೆ.
ಈ ಹಿಂದೆಯೂ ಸಹ ವಿಚಾರವಾದಿಗಳು ಸೂರ್ಯಗ್ರಹಣದ ಸಮಯದಲ್ಲಿ ಇದೇ ರೀತಿಯ ಬಿರಿಯಾನಿ ಔತಣಕೂಟ ಆಯೋಜಿಸಿದ್ದರು. ಪುರಿ ಶಂಕರಾಚಾರ್ಯರು ಸೇರಿದಂತೆ ಹಲವು ಹಿಂದೂ ನಾಯಕರು ಇದನ್ನು ಬಲವಾಗಿ ವಿರೋಧಿಸಿದ್ದರು. ಮೂಢ ಆಚರಣೆ ಮಾಡುವವರಿಗೆ ಸವಾಲೆಸೆದ ವಿಚಾರವಾದಿಗಳು ನಿನ್ನೆ ಗ್ರಹಣ ಕಾಲದಲ್ಲಿ ಇದೇ ರೀತಿಯ ಹಬ್ಬ ಆಚರಿಸಲಿದ್ದೇವೆ ಎಂದು ಬಹಿರಂಗವಾಗಿ ಘೋಷಿಸಿದ್ದರು.
ಗ್ರಹಣಗಳ ಸಮಯದಲ್ಲಿ ವೈಜ್ಞಾನಿಕವಾಗಿ ಯಾರು, ಏನು ಬೇಕಾದರೂ ತಿನ್ನಬಹುದು ಎಂಬ ಸಂದೇಶವನ್ನು ನೀಡಲು ವಿಚಾರವಾದಿಗಳ ಗುಂಪೊಂದು ಸಮುದಾಯ ಔತಣಕೂಟವನ್ನು ಬೆರ್ಹಾಂಪುರದಲ್ಲಿ ಏರ್ಪಡಿಸಿತ್ತು. ಈ ನಡೆಯನ್ನು ವಿರೋಧಿಸಲು ಧಾರ್ಮಿಕ ಕಾರ್ಯಕರ್ತರ ಗುಂಪು ಔತಣಕೂಟ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ಬಂದಿದೆ. ಈ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಸಂಘರ್ಷ ಉಂಟಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಇದೇ ರೀತಿಯ ಘಟನೆ ಲೋಹಿಯಾ ಅಕಾಡೆಮಿಯಲ್ಲೂ ನಡೆದಿದೆ. ವಿಚಾರವಾದಿಗಳು ಔತಣಕೂಟವನ್ನು ಆಯೋಜಿಸುತ್ತಿದ್ದಾಗ ಭಜರಂಗದಳದ ಸದಸ್ಯರು ಸ್ಥಳಕ್ಕೆ ಬಂದು ಚಂದ್ರಗ್ರಹಣದ ಸಮಯದಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದನ್ನು ವಿರೋಧಿಸಿದರು.
ಒಡಿಶಾ ದೇವಾಲಯ ಸೇವಕರ ಸಂಘದ ಅಧ್ಯಕ್ಷ ಕಮಲೇಶ್ವರ್ ತ್ರಿಪಾಠಿ ಮಾತನಾಡಿ, "ಚಂದ್ರಗ್ರಹಣದಂದು ಬಿರಿಯಾನಿ ಕೂಟ ಆಯೋಜಿಸುವ ಮೂಲಕ ಅವರು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ವಿಚಾರವಾದಿಗಳ ಇಂತಹ ನಡೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ" ಎಂದರು.
ಇದನ್ನೂ ಓದಿ:ಹುಣ್ಣಿಮೆ, ಗ್ರಹಣ ಹಿನ್ನೆಲೆ: ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಭಕ್ತಸಾಗರ