ಮೊರೆನಾ (ಮಧ್ಯಪ್ರದೇಶ): ಬಿಜೆಪಿ ಹಿರಿಯ ಮುಖಂಡರು ಆಯೋಜಿಸಿದ್ದ ಭೋಜನ ಕೂಟದಲ್ಲಿ ನಾಯಕರೊಂದಿಗೆ ಭೋಜನ ಮಾಡಲು ಅವಕಾಶ ಸಿಗದ ಕಾರಣ ಮೊರೆನಾ ಬಿಜೆಪಿ ಅಧ್ಯಕ್ಷ ಯೋಗೇಶ್ ಪಾಲ್ ಗುಪ್ತಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗ ಹರಿಯೊಮ್ ಶರ್ಮಾ ನಡುವೆ ಮಾತಿನ ಚಕಮಕಿ ನಡೆದಿದೆ.
ನಿನ್ನೆ ಭಾರತೀಯ ಜನತಾ ಪಕ್ಷದ ಬೂತ್ ಅಧ್ಯಕ್ಷ ರಾಮವೀರ ನಿಗಮ್ ಅವರ ನಿವಾಸದಲ್ಲಿ ರಾಜ್ಯ ಅಧ್ಯಕ್ಷ ವಿ.ಡಿ. ಶರ್ಮಾ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಭೋಜನಾ ಕೂಟ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಸೇರಿದಂತೆ ಸ್ಥಳೀಯ ಶಾಸಕರು ಆಗಮಿಸಿದ್ದರು.
ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಂಧಿಯಾ ಬೆಂಬಲಿಗ ಹರಿಯೊಮ್ ಶರ್ಮಾ ಪ್ರಮುಖ ನಾಯಕರೊಂದಿಗೆ ಊಟಕ್ಕೆ ತೆರಳಲು ಬಯಸಿದ್ದರು. ಆದರೆ ಸ್ಥಳಾವಕಾಶ ಇಲ್ಲದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಯೋಗೇಶ್ ಪಾಲ್ ಗುಪ್ತಾ, ಹರಿಯೋಮ್ ಶರ್ಮಾರಿಗೆ ಹೊರಗಡೆ ನಿಲ್ಲುವಂತೆ ಸೂಚಿಸಿದರು.
ಓದಿ: 2022ರ ಯುಪಿ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿಯಿಲ್ಲ: ಮಾಯಾವತಿ
ಇದರಿಂದ ಜಿಲ್ಲಾಧ್ಯಕ್ಷರ ಮೇಲೆ ಕೋಪಗೊಂಡ ಶರ್ಮಾ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರಾಜ್ಯ ಅಧ್ಯಕ್ಷ ವಿ.ಡಿ. ಶರ್ಮಾ ಅವರು ಹೇಳಿದರೆ ಹೊರಟು ಹೋಗುತ್ತೇನೆ. ಇಲ್ಲದಿದ್ದರೆ ಒಳಗೆ ಹೋಗುತ್ತೇನೆ ಎಂದು ಕ್ಯಾತೆ ತೆಗೆದರು. ಈ ವೇಳೆ ಜಿಲ್ಲಾಧ್ಯಕ್ಷ ಮತ್ತು ಹರಿಯೊಮ್ ಶರ್ಮಾ ನಡುವೆ ಜಗಳ ಆರಂಭವಾಗಿ ಅವಾಚ್ಯ ಶಬ್ದಗಳಿಂದ ಪರಸ್ಪರ ಇಬ್ಬರು ಬೈದಾಡಿಕೊಂಡಿದ್ದರು.
ಈ ವೇಳೆ ಸ್ಥಳದಲ್ಲಿದ್ದ ರಾಜ್ಯ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್ ಇಬ್ಬರನ್ನು ಸಮಾಧಾನ ಪಡಿಸಿ, ವಾತಾವರಣ ತಿಳಿಗೊಳಿಸಿದರು.