ನವದೆಹಲಿ: ಪೂರ್ಣ ಪ್ರಮಾಣದ ಪ್ರಯಾಣಿಕ ರೈಲು ಸೇವೆಗಳ ಕಾರ್ಯಾಚರಣೆ ಕುರಿತು ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದ್ದು, ಈ ಕುರಿತಾದ ವದಂತಿಗಳಿಗೆ ತೆರೆ ಎಳೆದಿದೆ. ಊಹಾಪೋಹಗಳಿಗೆ ಕಿವಿಗೊಡಬೇಡಿ, ಅಂತಹ ಯಾವುದೇ ಮಾಹಿತಿಯಿದ್ದರೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದೆ.
ಏಪ್ರಿಲ್ನಿಂದ ಪೂರ್ಣ ಪ್ರಯಾಣಿಕ ರೈಲು ಸೇವೆಗಳನ್ನು ಪುನರಾರಂಭಿಸುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಇಲಾಖೆ, ಪ್ಯಾಸೆಂಜರ್ ರೈಲುಗಳ ಕಾರ್ಯಾಚರಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದೆ.
ಹಂತ ಹಂತವಾಗಿ ಇಲಾಖೆಯು ರೈಲು ಸೇವೆಗಳ ಸಂಖ್ಯೆ ಹೆಚ್ಚಿಸುತ್ತಿದೆ. ಈಗಾಗಲೇ ಶೇ 65ಕ್ಕೂ ಹೆಚ್ಚು ರೈಲುಗಳು ಸೇವೆ ನೀಡುತ್ತಿವೆ. ಜನವರಿಯಲ್ಲಿ 250ಕ್ಕೂ ಅಧಿಕ ರೈಲುಗಳನ್ನು ಹಳಿಗೆ ಇಳಿಸಲಾಗಿದೆ. ಮುಂದೆಯೂ ಕ್ರಮೇಣ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದೆ.