ನವದೆಹಲಿ: ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಕಡಪ ಸಂಸದ ವೈ.ಎಸ್ ಅವಿನಾಶ್ ರೆಡ್ಡಿ ಅವರನ್ನು ಏಪ್ರಿಲ್ 25ರವರೆಗೆ ಬಂಧಿಸದಂತೆ ತೆಲಂಗಾಣ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ವಿವೇಕಾನಂದ ರೆಡ್ಡಿ ಅವರ ಪುತ್ರಿ ಡಾ.ಸುನಿತಾ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್ ನರಸಿಂಹಳ ನೇತೃತ್ವದ ಪೀಠ ಮಧ್ಯಂತರ ಆದೇಶಕ್ಕೆ ಅಸಹನೆ ವ್ಯಕ್ತಪಡಿಸಿತು. ಪ್ರಕರಣ ನಿರ್ಣಾಯಕ ಹಂತಕ್ಕೆ ತಲುಪಿದ್ದು, ತನಿಖೆ ಹಳಿತಪ್ಪುವ ಅಪಾಯವನ್ನು ಸೃಷ್ಟಿಸಿದೆ. ಆ ಆದೇಶಗಳು ತೀರಾ ಕೆಟ್ಟದಾಗಿದ್ದು, ಸ್ವೀಕಾರಾರ್ಹವಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಚಾಲ್ತಿಯಲ್ಲಿ ಇರಲು ಸಾಧ್ಯವಿಲ್ಲ ಹಾಗಾಗಿ ಸ್ಟೇ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುನೀತಾ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ಸಿಬಿಐ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ದೇವೇಂದ್ರ ಪಾಲ್ ಸಿಂಗ್ ಮತ್ತು ಅವಿನಾಶ್ ರೆಡ್ಡಿ ಪರವಾಗಿ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿದರು. ಅವಿನಾಶ್ ರೆಡ್ಡಿ ಅವರನ್ನು ಏಪ್ರಿಲ್ 24 ರವರೆಗೆ ಬಂಧಿಸದಂತೆ ಸುಪ್ರೀಂಕೋರ್ಟ್ ಸಿಬಿಐಗೆ ಆದೇಶಿಸಿದ್ದು, ಮತ್ತೊಮ್ಮೆ ಪ್ರಕರಣದ ವಿಚಾರಣೆ ನಡೆಯಲಿದೆ ಮತ್ತು ಅದರಂತೆ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಸುನಿತಾ ರೆಡ್ಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, "ಇದೊಂದು ಅತ್ಯಂತ ಘೋರ ಹತ್ಯೆಯಾಗಿದ್ದು, ರಕ್ತದ ಮಡುವಿನಲ್ಲಿ ಶವ ಬಿದ್ದಿದ್ದರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹಬ್ಬಿಸಿ ಪ್ರಕರಣವನ್ನು ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಇತ್ತೀಚೆಗಷ್ಟೇ ಸಿಬಿಐ ಅವಿನಾಶ್ ರೆಡ್ಡಿ ತಂದೆ ಹಾಗೂ ಮತ್ತೊಬ್ಬ ಆರೋಪಿ ಉದಯ್ ಕುಮಾರ್ ರೆಡ್ಡಿಯನ್ನು ಬಂಧಿಸಿತ್ತು. ಅವಿನಾಶ್ ರೆಡ್ಡಿ ಪ್ರಕರಣದಲ್ಲಿ ತೆಲಂಗಾಣ ಹೈಕೋರ್ಟ್ ಅವರನ್ನು ಬಂಧಿಸದಂತೆ ಆದೇಶ ನೀಡಿದೆ. 'ರಾಜಕೀಯ ಸಂಘರ್ಷದ ಜತೆಗೆ ಈ ಪ್ರಕರಣದಲ್ಲಿ ಹಲವು ಅಂಶಗಳು ನಡೆದಿವೆ. ಆರೋಪಿಗಳಿಗೆ ಪ್ರಶ್ನೆಗಳ ಪ್ರಿಂಟ್ ಪ್ರತಿಯನ್ನು ಮುಂಚಿತವಾಗಿ ನೀಡಬೇಕು ಎಂದ ಹೈಕೋರ್ಟ್, ಆರೋಪಿಯನ್ನು ಮನೆಯ ಅತಿಥಿಯಂತೆ ಪರಿಗಣಿಸುತ್ತಿರುವಂತೆ ಕಾಣುತ್ತಿದೆ" ಎಂದು ಅವರು ದೂರಿದರು.. ಅಲ್ಲದೇ ವಿವೇಕಾನಂದ ರೆಡ್ಡಿ ಹತ್ಯೆಯ ವೇಳೆ ಕರ್ತವ್ಯದಲ್ಲಿದ್ದ ಸಿಐಯನ್ನು ಅಮಾನತು ಮಾಡಲಾಗಿತ್ತು ಎಂದು ಸುನಿತಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಎಲ್ಲ ರೀತಿಯ ಪುರಾವೆಗಳಿವೆ-ಸಿಬಿಐ: ನ್ಯಾಯಮೂರ್ತಿ ಚಂದ್ರಚೂಡ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಬಿಐ ವಕೀಲರು "ಈ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನು ಪಡೆದಿರುವ ವ್ಯಕ್ತಿಯು ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರ ಎಂದು ಹೇಳಲಾಗಿದೆ. ರಾಜಕೀಯ ಘರ್ಷಣೆಯಿಂದ ಈ ಕೊಲೆ ನಡೆದಿದೆ ಎಂಬುದಕ್ಕೆ ಎಲ್ಲಾ ರೀತಿಯ ಪುರಾವೆಗಳು ಸಂಸ್ಥೆಯ ಬಳಿ ಇವೆ" ಎಂದು ಸಿಬಿಐ ವಕೀಲರು ತಿಳಿಸಿದ್ದಾರೆ.
ಈ ಹಿಂದೆ ಹತ್ಯೆಗೀಡಾದ ವ್ಯಕ್ತಿ ಸ್ಪರ್ಧಿಸಿದ್ದ ಸ್ಥಾನದಲ್ಲಿ ಸಿಎಂ ಜಗನ್ ಅವರ ತಾಯಿ ಸ್ಪರ್ಧಿಸಿದ್ದರು ಎಂದು ಸಿಬಿಐ ವಕೀಲರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತಾಂತ್ರಿಕ ನೆರವಿನೊಂದಿಗೆ ತನಿಖೆ ನಡೆಸುತ್ತಿದೆ. ಆರೋಪಿಗಳಿಗೆ 40 ಕೋಟಿ ರೂಪಾಯಿ ಸುಪಾರಿ ನೀಡಲು ಶಂಕಿತರು ಸಿದ್ಧರಾಗಿದ್ದು, ಸ್ವಲ್ಪ ಮೊತ್ತವನ್ನು ಈಗಾಗಲೇ ನೀಡಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
ಎಲ್ಲಾ ಆರೋಪಿಗಳು ಕೊಲೆಗೂ ಮುನ್ನ ಒಂದೇ ಸ್ಥಳದಲ್ಲಿ ಭೇಟಿಯಾಗಿ ನಂತರ ಅಲ್ಲಿಂದ ಬೇರ್ಪಟ್ಟಿದ್ದಾರೆ ಎಂದು ಸಿಬಿಐ ವಕೀಲರು ಪೀಠದ ಮುಂದೆ ಬಹಿರಂಗಪಡಿಸಿದ್ದಾರೆ. ಕೊಲೆಯ ನಂತರ, ಅವರ ದೇಹಕ್ಕೆ ಯಾವುದೇ ರಕ್ತ ಅಥವಾ ಗಾಯಗಳು ಕಾಣಿಸದಂತೆ ಹೊಲಿಗೆ ಮತ್ತು ಬ್ಯಾಂಡೇಜ್ ಮಾಡಲಾಗಿದೆ. ವಿವೇಕಾನಂದ ಅವರ ಮೃತದೇಹವನ್ನು ಮನೆಯೊಳಗೆ ಪ್ಯಾಕ್ ಮಾಡಿ ಹೊರಗೆ ತಂದಿರುವ ಫೋಟೋಗಳೂ ಇವೆ. ಕೆಲವರು ಆಕಸ್ಮಿಕವಾಗಿ ತಮ್ಮ ಫೋನ್‌ನಲ್ಲಿ ಫೋಟೋ ತೆಗೆದಿದ್ದರಿಂದ ವಿಷಯ ಬೆಳಕಿಗೆ ಬಂದಿದೆ. ಅಮಾನತುಗೊಂಡಿರುವ ಸಿಐ ಈ ಹಿಂದೆ ಸಿಆರ್‌ಪಿಸಿ 160ರ ಅಡಿಯಲ್ಲಿ ಸಾಕ್ಷಿ ಹೇಳಲು ಒಪ್ಪಿಕೊಂಡಿದ್ದರು. ಆದರೆ ಅವರು ನ್ಯಾಯಾಲಯಕ್ಕೆ ಬರುವ ವೇಳೆಗೆ ಮನಸ್ಸು ಬದಲಾಯಿಸಿದರು ಮತ್ತು ನಂತರ ಅವರಿಗೆ ಬಡ್ತಿ ನೀಡಿ ಪೋಸ್ಟಿಂಗ್ ನೀಡಲಾಯಿತು ಎಂದು ಸಿಬಿಐ ವಕೀಲರು ಪೀಠದ ಗಮನಕ್ಕೆ ತಂದರು. ಅವಿನಾಶ್ ರೆಡ್ಡಿ ಪರ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿದ್ದರು.
ಸಿಬಿಐಗೆ ಪ್ರಕರಣ ಹಸ್ತಾಂತರ: ಆಂಧ್ರಪ್ರದೇಶದ ದಿ.ಮುಖ್ಯಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿ ಅವರ ಸಹೋದರರಲ್ಲಿ ಒಬ್ಬರಾದ ವಿವೇಕಾನಂದ ರೆಡ್ಡಿ ಅವರು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ವಾರಗಳ ಮೊದಲು ಮಾ.15, 2019 ರ ರಾತ್ರಿ ಕಡಪಾ ಜಿಲ್ಲೆಯ ಪುಲಿವೆಂದುಲದಲ್ಲಿರುವ ಅವರ ನಿವಾಸದಲ್ಲಿ ಕೊಲೆಯಾಗಿದ್ದರು. ಈ ಪ್ರಕರಣವನ್ನು ಆರಂಭದಲ್ಲಿ ರಾಜ್ಯ ಅಪರಾಧ ತನಿಖಾ ವಿಭಾಗದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿತು. ಆದರೆ ಜುಲೈ 2020ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು.