ವಾಷಿಂಗ್ಟನ್ ಡಿಸಿ: ಭಾರತದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ತಮ್ಮ ಪತ್ನಿ ಶಿವಮಾಲಾ ಅವರೊಂದಿಗೆ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ತೆಲುಗು ಸಮುದಾಯದವರು ಆಯೋಜಿಸಿದ್ದ 'ಮೀಟ್ ಆ್ಯಂಡ್ ಗ್ರೀಟ್' ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾ.ಎನ್.ವಿ.ರಮಣ, "ನಾವು ಎಷ್ಟೇ ದೂರದಲ್ಲಿದ್ದರೂ, ನಮ್ಮ ಊರು, ಜನರನ್ನು ಬಿಟ್ಟು ದೂರ ಹೋಗಿದ್ದರೂ, ನಮ್ಮ ಮಾತೃಭಾಷೆ ಹಾಗೂ ಸಂಸ್ಕೃತಿಯನ್ನು ಯಾವತ್ತೂ ಮರೆಯಬಾರದು" ಎಂದರು.
"ನೀವು ನಿಮ್ಮ ಊರನ್ನು ಬಿಟ್ಟು ಎಷ್ಟು ದೂರ ಹೋಗಿದ್ದರೂ, ಮತ್ತೆ ಮತ್ತೆ ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಹುಟ್ಟೂರಿಗೆ ಹೋಗುತ್ತಿರಬೇಕು. ಯಾವತ್ತೂ ನೀವು ಬೆಳೆದ ಪರಿಸರ, ನಿಮ್ಮೂರಿನ ಮಣ್ಣಿನ ಪರಿಮಳ, ನಿಮ್ಮ ಸ್ನೇಹಿತರನ್ನು ಮರೆಯಬೇಡಿ. ವಿಶ್ವಮಟ್ಟದಲ್ಲಿ ನಮ್ಮ ಸಂಸ್ಕೃತಿಯ ಪ್ರಚಾರಕ್ಕೆ ನಾವು ಶ್ರಮಿಸಬೇಕು. ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು" ಎಂದು ಕಿವಿಮಾತು ಹೇಳಿದರು.
ಇದಕ್ಕೆ ಪೂರಕವೆಂಬಂತೆ ಸುಪ್ರೀಂಕೋರ್ಟ್ನಲ್ಲಿ ನಡೆದ ಘಟನೆಯೊಂದನ್ನು ವಿವರಿಸಿದ ಅವರು, "ನಾನು ಸುಪ್ರೀಂಕೋರ್ಟ್ಗೆ ಹೋದಾಗ ನನ್ನ ಬಂಗಲೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಾಮಫಲಕ ಹಾಕಲಾಗಿತ್ತು. ನಾನು ಮಾತ್ರ ನನ್ನ ಹೆಸರಿನ ನಾಮಫಲಕ ತೆಲುಗಿನಲ್ಲೇ ಇರಬೇಕು ಎಂದು ಹೇಳಿದೆ. ಅವರು ಸಾಧ್ಯವಿಲ್ಲ ಎಂದರು. ಆದರೆ ನನ್ನ ಮಾತೃಭಾಷೆಯ ವಿಷಯದಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನನ್ನ ಬಂಗಲೆಯ ಒಳಗೆ ಹಾಗೂ ಹೊರ ಗೇಟ್ನಲ್ಲಿ ನಾಮಫಲಕ ತೆಲುಗು ಹಾಗೂ ಇಂಗ್ಲಿಷ್ನಲ್ಲಿ ಇರಬೇಕು ಎಂದು ಬಲವಾಗಿ ಹೇಳಿದ್ದೆ" ಎಂದು ತಮ್ಮ ಮಾತೃಭಾಷೆ ಪ್ರೇಮದ ಅನುಭವ ಹಂಚಿಕೊಂಡರು.
"ನಾವು ಮನೆಯಲ್ಲಿದ್ದಾಗ ಯಾವಾಗಲೂ ನಮ್ಮ ಮಾತೃಭಾಷೆಯಲ್ಲಿ ಮಾತನಾಡಬೇಕು. ನಾವು ಯಾವಾಗಲೂ ನಮ್ಮ ಮಾತೃಭಾಷೆ, ಸಂಸ್ಕೃತಿ ಮತ್ತು ತಾಯಿಯನ್ನು ನೆನಪಿಸಿಕೊಳ್ಳಬೇಕು. ಶತಕ ಸಾಹಿತ್ಯವನ್ನು ಡೌನ್‌ಲೋಡ್ ಮಾಡಿಕೊಂಡು ಮಕ್ಕಳೂ ಓದುವಂತೆ ಮಾಡಬೇಕು. ಪ್ರತಿಯೊಬ್ಬರ ಮನೆಯಲ್ಲೂ ಪೇದಬಾಲಶಿಕ್ಷ ಪುಸ್ತಕ ಇರಬೇಕು. ಮಕ್ಕಳಿಗೆ ಇಂಗ್ಲಿಷ್ ಜೊತೆಗೆ ತೆಲುಗು ಕಲಿಸುವುದು ಕಡ್ಡಾಯ. ಮಕ್ಕಳು ತೆಲುಗು ಮಾತನಾಡುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಏನನ್ನಾದರೂ ತಪ್ಪಾಗಿ ಹೇಳಿದಾಗ ನೀವು ಅದನ್ನು ಸರಿಪಡಿಸಬೇಕೇ ಹೊರತು, ಅವರ ಮೇಲೆ ಕೋಪ ಮಾಡಿಕೊಳ್ಳಬೇಡಿ" ಎಂದು ಅಮೆರಿಕದ ತೆಲುಗು ಜನರಿಗೆ ಸಲಹೆ ನೀಡಿದರು.
ಇದನ್ನೂ ಓದಿ : ಪ್ರತಿಯೊಬ್ಬರು ತಮ್ಮ ಊರು, ಮಣ್ಣಿನ ವಾಸನೆ ನೆನಪಿಟ್ಟುಕೊಳ್ಳಬೇಕು: ಸಿಜೆಐ ರಮಣ