ನವದೆಹಲಿ: ಇಲ್ಲಿನ ರೋಹಿಣಿ ನ್ಯಾಯಾಲಯದ ಆವರಣದಲ್ಲಿ ನಡೆದ ಶೂಟೌಟ್ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಸಿಜೆಐ ರಮಣ ಅವರು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ರೊಂದಿಗೆ ಮಾತುಕತೆ ನಡೆಸಿದ್ದಾರೆ. ನ್ಯಾಯಾಲಯದ ಕಾರ್ಯ ನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಪೊಲೀಸರು ಮತ್ತು ವಕೀಲರ ಜತೆ ಮಾತನಾಡುವಂತೆ ಸಲಹೆ ನೀಡಿದ್ದಾರೆ ಎಂದು ಸುಪ್ರೀಂಕೋರ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯಾಯಾಲಯ ಸಂಕೀರ್ಣಗಳು ಮತ್ತು ನ್ಯಾಯಾಂಗ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯ ವಿಷಯವು ಈಗಾಗಲೇ ಸುಪ್ರೀಂ ಕೋರ್ಟ್‌ನ ಪರಿಗಣನೆಯಲ್ಲಿದೆ. ಮುಂದಿನ ವಾರ ಈ ವಿಷಯದ ವಿಚಾರಣೆ ನಡೆಯುವ ಸಾಧ್ಯತೆಯಿದೆ ಎಂದು ಸುಪ್ರೀಂ ಅಧಿಕಾರಿ ತಿಳಿಸಿದ್ದಾರೆ.
ಶುಕ್ರವಾರ ದೆಹಲಿಯ ಕೋರ್ಟ್ ಆವರಣದಲ್ಲಿ ಗ್ಯಾಂಗ್ಸ್ಟರ್ ಜಿತೇಂದರ್ ಗೋಗಿ ಮೇಲೆ ಫೈರಿಂಗ್ ನಡೆದಿದ್ದು, ಗೋಗಿ ಸೇರಿ ಮೂವರು ಮೃತಪಟ್ಟಿದ್ದರು. ವಕೀಲರ ವೇಷ ಧರಿಸಿ ನ್ಯಾಯಾಲಯದ ಆವರಣ ಪ್ರವೇಶಿಸಿದ್ದ ಕಿಡಿಗೇಡಿಗಳು, ಏಕಾಏಕಿ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬಂದೂಕುಧಾರಿಗಳನ್ನು ಟಿಲ್ಲು ಗ್ಯಾಂಗ್ (Tillu gang) ಎಂದು ಶಂಕಿಸಲಾಗಿದೆ.
ಈ ವೇಳೆ, ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, 30 ಕ್ಕೂ ಹೆಚ್ಚಿನ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಗೋಗಿಗೆ ಏಳು ಬುಲೆಟ್ ತಗುಲಿವೆ ಎನ್ನಲಾಗ್ತಿದ್ದು, ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ದೆಹಲಿ ರೋಹಿಣಿ ಕೋರ್ಟ್ ಆವರಣದಲ್ಲೇ ಶೂಟೌಟ್; ಗ್ಯಾಂಗ್ಸ್ಟರ್ ಸೇರಿ ಮೂವರು ಸಾವು