ಬದ್ಗಾಂ(ಜಮ್ಮು ಕಾಶ್ಮೀರ): ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕಾಶ್ಮೀರಿ ಪಂಡಿತರ ಮೇಲೆ ದಾಳಿಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಅವರಿರುವ ಕಾಲೋನಿಗಳಲ್ಲಿ ಹೆಚ್ಚು ಭದ್ರತೆ ನೀಡಲಾಗುತ್ತಿದೆ.
ಕೆಲವರು ಹೆಚ್ಚು ಭಯದಲ್ಲಿದ್ದು, ಬದ್ಗಾಂ ಮತ್ತು ಮಧ್ಯ ಕಾಶ್ಮೀರದಲ್ಲಿ ವಾಸಿಸುವ ಕೆಲವು ಕಾಶ್ಮೀರಿ ಹಿಂದೂ ಕುಟುಂಬಗಳು ಜಮ್ಮುವಿನ ಕಡೆಗೆ ವಲಸೆ ಹೊರಟಿವೆ. ಈ ವೇಳೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳಿಗೆ ಹೆದರಿ ನಾವು ಜಮ್ಮುವಿನ ಕಡೆಗೆ ಹೊರಟಿದ್ದೇವೆ ಎಂದು ಹೇಳಿದ್ದಾರೆ.
ಈ ಮಧ್ಯೆ ಬದ್ಗಾಂನ ಶೇಖ್ಪೋರಾದಲ್ಲಿನ ಕಾಲೋನಿಯೊಂದಕ್ಕೆ ಸಂಪೂರ್ಣವಾಗಿ ಭದ್ರತೆ ನೀಡಲಾಗಿದೆ. ಈ ಪ್ರದೇಶಕ್ಕೆ ಬರುವವರನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗುತ್ತದೆ.
ಶುಕ್ರವಾರ ಬದ್ಗಾಂ ಜಿಲ್ಲಾಧಿಕಾರಿ ಹಾಗೂ ಎಸ್ಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದು, ಯಾರೂ ಕೂಡಾ ಭಯಪಡುವ ಅಗತ್ಯವಿಲ್ಲ. ಭದ್ರತೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಅಧಿಕಾರಿಗಳು ಭರವಸೆ ನೀಡಿದರೂ ಕೆಲವರು ಭಯದಲ್ಲಿಯೇ ಬದುಕುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭರವಸೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಶ್ಮೀರಿ ಪಂಡಿತರು ಮತ್ತು ಅಲ್ಪಸಂಖ್ಯಾತರಿರುವ ಕಾಲೋನಿಗಳಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ ಎಂದು ಭದ್ರತಾ ಏಜೆನ್ಸಿಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಲಖಿಂಪುರ ಹಿಂಸಾಚಾರ: ಪೊಲೀಸರ ಮುಂದೆ ಹಾಜರಾದ ಕೇಂದ್ರ ಸಚಿವರ ಪುತ್ರ