ಶ್ರೀನಗರ(ಜಮ್ಮು ಕಾಶ್ಮೀರ): ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರನ್ನು ಹತ್ಯೆ ಮಾಡಿದ ಘಟನೆ ಶ್ರೀನಗರದ ನೌಗಮ್ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಪರಾಧ ತನಿಖಾ ವಿಭಾಗದ (ಸಿಐಡಿ) ಇನ್ಸ್‌ಪೆಕ್ಟರ್ ಪರ್ವೇಜ್ ಅಹ್ಮದ್ ದಾರ್ ಮೃತಪಟ್ಟಿದ್ದಾರೆ.
ನೌಗಮ್‌ನ ಕನಿಪೋರಾ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದಾಗ ಅಪರಿಚಿತರು ಗುಂಡಿನ ದಾಳಿ ನಡೆಸಿರುವ ಮಾಹಿತಿ ದೊರೆತಿದೆ. ಗುಂಡಿನ ದಾಳಿ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪರ್ವೇಜ್ ಅವರನ್ನು ಪೆರಿಂಪೋರಾ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ದಾಳಿಕೋರರನ್ನು ಭಯೋತ್ಪಾದಕರೆಂದು ಅನುಮಾನಿಸಲಾಗಿದೆ.
ಇದನ್ನೂ ಓದಿ: ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್; ಸಿಎಂ ಯಡಿಯೂರಪ್ಪ
ಉತ್ತರ ಕಾಶ್ಮೀರದ ಸೊಪೋರ್ ಪಟ್ಟಣದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೂವರು ಲಷ್ಕರ್-ಎ-ತೈಬಾ ಉಗ್ರರನ್ನು ಪೊಲೀಸರು ಮತ್ತು ಭದ್ರತಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.