ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಎಲ್ಲರಿಗೂ ಕಳವಳ ಮೂಡಿಸುತ್ತಿರುವ ವಿಷಯವಾಗಿದೆ. ಕಳೆದ ಹಲವು ವಾರಗಳಿಂದ ಭಾರತದಲ್ಲಿ ಹಣದುಬ್ಬರದ ದರವು ಶೇಕಡಾ 6 ಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಹೂಡಿಕೆದಾರರು ಹಣದುಬ್ಬರಕ್ಕಿಂತ ಹೆಚ್ಚಿನ ಆದಾಯವನ್ನು ತರುವ ಹೂಡಿಕೆ ವಿಧಾನಗಳನ್ನು ಹುಡುಕಬೇಕು. ಆಗ ಮಾತ್ರ ಅವರು ಭವಿಷ್ಯದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳಬಹುದು.
ತಕ್ಷಣಕ್ಕೆ ಅಲ್ಪ ಲಾಭ ನೋಡಬೇಡಿ: ತಕ್ಷಣದ ಆದಾಯವನ್ನು ತರುವ ಎಲ್ಲ ರೀತಿಯ ಹೂಡಿಕೆ ವಿಧಾನಗಳಲ್ಲಿ ಹೂಡಿಕೆ ಮಾಡುವುದು ಜನತೆಯ ಸಾಮಾನ್ಯ ಪ್ರವೃತ್ತಿಯಾಗಿದೆ. ಅನೇಕ ಜನರು ದೀರ್ಘಾವಧಿಯ ಆದಾಯಕ್ಕಿಂತ ಹೆಚ್ಚಾಗಿ ಅಲ್ಪಾವಧಿಯ ಲಾಭಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ. ಆದರೆ, ಇದು ಅಂತಿಮವಾಗಿ ದುರ್ಬಲ ಬಂಡವಾಳ ಹೂಡಿಕೆಗೆ ಕಾರಣವಾಗುತ್ತದೆ.
ಹಣದುಬ್ಬರವನ್ನು ತಡೆದುಕೊಳ್ಳುವ ಹೂಡಿಕೆಗಳ ಪಾಲಿಸಿಗಳನ್ನು ಆಯ್ಕೆ ಮಾಡಲು ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ. ಆದರೆ, ನಮ್ಮ ಹೂಡಿಕೆಯ ಮೇಲೆ ಹಣದುಬ್ಬರದ ಪ್ರಭಾವ ತಡೆಯಲು ಕೆಲವು ವಿಧಾನಗಳನ್ನು ಅನುಸರಿಸಿದರೆ ಅಷ್ಟರಮಟ್ಟಿಗೆ ನಾವು ಸೇಫ್ ಆಗಬಹುದು.
ವಿವಿಧ ವಿಭಾಗಗಳಲ್ಲಿ ಹಣ ತೊಡಗಿಸಿ: ವಿವಿಧ ರೀತಿಯಲ್ಲಿ ಹೂಡಿಕೆ ಮಾಡುವುದು ಅಂದರೆ ವೈವಿಧ್ಯಮಯವಾಗಿ ಹೂಡಿಕೆ ಮಾಡುವುದು ಹಣದುಬ್ಬರ ಎದುರಿಸಲು ಇರುವ ಖಚಿತವಾದ ಮಾರ್ಗವಾಗಿದೆ. ಬೆಲೆ ಏರಿಕೆಯ ಪರಿಣಾಮವು ಪ್ರತಿಯೊಂದು ಪಾಲಿಸಿಗೂ ಬದಲಾಗುತ್ತಿರುತ್ತದೆ. ಹೂಡಿಕೆದಾರರು ಇದನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿನ ಏರಿಳಿತದ ಸಮಯದಲ್ಲಿ, ವಿವಿಧ ರೀತಿಯ ಹೂಡಿಕೆಗಳನ್ನು ಆಯ್ಕೆ ಮಾಡುವ ಮೂಲಕ ಅಪಾಯದ ಅಂಶವನ್ನು ಕಡಿಮೆ ಮಾಡಬಹುದು. ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗದೆ, ವಿವಿಧ ದೇಶಗಳ ಮಾರುಕಟ್ಟೆಗಳಲ್ಲಿ ಹಣ ಹೂಡುವುದು ಸೂಕ್ತ.
ಹೆಚ್ಚಿನ ರಿಸ್ಕ್ ಫ್ಯಾಕ್ಟರ್ ಹೊಂದಿರುವ ಯೋಜನೆಗಳು ಎಲ್ಲರಿಗೂ ಸರಿ ಹೊಂದಲ್ಲ: ಯಾವುದೇ ಹೂಡಿಕೆಯು ಹಣದುಬ್ಬರದ ಒತ್ತಡದ ಹೊರತಾಗಿಯೂ ಒಂದಿಷ್ಟು ಗಣನೀಯ ಆದಾಯ ನೀಡುವ ರೀತಿಯಲ್ಲಿ ಇರಬೇಕು. ಅದೇ ಸಮಯದಲ್ಲಿ, ಹೂಡಿಕೆದಾರರು ಅಪಾಯ ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಮತ್ತು ಅದರ ಪ್ರಕಾರ ಹಣಕಾಸಿನ ಯೋಜನೆಗಳನ್ನು ಮಾಡಬೇಕು. ಹೆಚ್ಚಿನ ರಿಸ್ಕ್ ಫ್ಯಾಕ್ಟರ್ ಹೊಂದಿರುವ ಯೋಜನೆಗಳು ಎಲ್ಲ ಜನರಿಗೆ ಸರಿ ಹೊಂದುವುದಿಲ್ಲ ಎಂಬುದು ಗೊತ್ತಿರಲಿ.
ಬೆಲೆಬಾಳುವ ಲೋಹಗಳ ಮೇಲೆ ಹೂಡಿಕೆ ಮಾಡುವುದರಿಂದ ಹಣದುಬ್ಬರದ ಪರಿಣಾಮದಿಂದ ಬಹುತೇಕ ಮಟ್ಟಿಗೆ ಪಾರಾಗಬಹುದು. ನಾವು ಇತಿಹಾಸವನ್ನು ನೋಡಿದಾಗ, ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳು ಬೆಲೆ ಏರಿಕೆಯ ಪರಿಣಾಮ ಹೇಗೆ ತಡೆದುಕೊಳ್ಳುತ್ತವೆ ಎಂಬುದನ್ನು ನಾವು ನೋಡಬಹುದು. ಈ ಎರಡು ಅಮೂಲ್ಯವಾದ ಲೋಹಗಳು ಸಾಮಾಜಿಕ - ಆರ್ಥಿಕ ಮತ್ತು ಭಾವನಾತ್ಮಕವಾಗಿ ಭಾರತೀಯರೊಂದಿಗೆ ಬೇರ್ಪಡಿಸಲಾಗದ ಸಂಬಂಧ ಹೊಂದಿವೆ.
ಸುರಕ್ಷಿತವಾಗಿ ವಿನಮಯ ವಹಿವಾಟು ನಿಧಿಗಳಲ್ಲಿ ಹೂಡಿಕೆ ಮಾಡಬಹುದು: ಆದ್ದರಿಂದ, ಚಿನ್ನ ಮತ್ತು ಬೆಳ್ಳಿಯ ಇಟಿಎಫ್‌ಗಳಲ್ಲಿ (ವಿನಿಮಯ ವಹಿವಾಟು ನಿಧಿಗಳು) ಹೂಡಿಕೆಗಳನ್ನು ಸುರಕ್ಷಿತವಾಗಿ ಮಾಡಬಹುದು. ಇದಲ್ಲದೇ, ಈ ಇಟಿಎಫ್‌ಗಳ ಕಾರ್ಯಕ್ಷಮತೆಯು ಈಕ್ವಿಟಿ ಮತ್ತು ಸಾಲ ಮ್ಯೂಚುಯಲ್ ಫಂಡ್‌ಗಳಿಂದ ಪ್ರಭಾವಿತವಾಗುವುದಿಲ್ಲ. ಆರ್ಥಿಕ ಕುಸಿತದ ಸಮಯದಲ್ಲಿ, ಈ ಅಮೂಲ್ಯ ಲೋಹಗಳು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿವೆ.
ಪ್ರತಿಯೊಬ್ಬ ಹೂಡಿಕೆದಾರ ತನ್ನ ಹೂಡಿಕೆಗಳು ಗರಿಷ್ಠ ಆದಾಯ ಗಳಿಸಿದಾಗ ಮಾತ್ರ ಆತ ಹಣದುಬ್ಬರದ ಪ್ರಭಾವವನ್ನು ಜಯಿಸಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದಕ್ಕಾಗಿ, ಈಕ್ವಿಟಿಗಳು ಒಂದು ಆಯ್ಕೆಯಾಗಿವೆ. ಸ್ಟಾಕ್ ಮಾರುಕಟ್ಟೆಯ ಉತ್ತಮವಾದ ಜ್ಞಾನ ಮತ್ತು ನಿರಂತರ ವೀಕ್ಷಣೆಯೊಂದಿಗೆ, ನಾವು ಹೆಚ್ಚು ವಿಶ್ವಾಸಾರ್ಹವಾದ ಷೇರುಗಳನ್ನು ಆಯ್ಕೆ ಮಾಡಬಹುದು.
ಕೆಲವು ಕಂಪನಿ ಷೇರುಗಳು ಸುಮ್ಮನೆ ಆಯ್ಕೆ ಮಾಡಿಕೊಳ್ಳುವುದು ಸರಿಯಲ್ಲ; ಅದೇ ಸಮಯದಲ್ಲಿ, ಕೆಲವು ಕಂಪನಿಗಳ ಷೇರುಗಳನ್ನು ಸುಮ್ಮನೆ ಆಯ್ಕೆ ಮಾಡಿ ಅವುಗಳನ್ನು ಕೊಳ್ಳುವುದು ಲಾಭದಾಯಕವಲ್ಲ. ಅಂಥ ವಿಷಯಗಳಲ್ಲಿ ಹೂಡಿಕೆದಾರನೊಬ್ಬ ತನ್ನ ಭಾವನೆಗಳನ್ನು ನಿಯಂತ್ರಿಸುವುದು ಅಗತ್ಯ.
ಇನ್ನು ಪರ್ಯಾಯವಾಗಿ ಮ್ಯೂಚುವಲ್ ಫಂಡ್‌ಗಳಿಗೂ ಆದ್ಯತೆ ನೀಡಬಹುದು. ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (SIP) ಹೂಡಿಕೆ ಮಾಡುವ ಮೂಲಕ, ದೀರ್ಘಾವಧಿಯಲ್ಲಿ ಖಚಿತವಾದ ಆದಾಯವನ್ನು ಗಳಿಸಬಹುದು. ಅದೇ ಸಮಯದಲ್ಲಿ ಹಣದುಬ್ಬರದ ತೀವ್ರ ಪ್ರಭಾವದಿಂದ ಪಾರಾಗಲು ಉಳಿಸುವ ಮತ್ತು ಹೂಡಿಕೆ ಮಾಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅಲ್ಲದೆ ನಮ್ಮ ವೆಚ್ಚವನ್ನು ನಿಯಂತ್ರಣದಲ್ಲಿಟ್ಟು ಕುಟುಂಬದ ಬಜೆಟ್ ಅನ್ನು ನಿಯಂತ್ರಿಸಬೇಕು.
ಇದನ್ನೂ ಓದಿ: ಎಫ್ಡಿ ಮೇಲೆ ಅತಿ ಹೆಚ್ಚು ಬಡ್ಡಿ ಆಸೆ ಬೇಡ.. ಅಸಲೂ ಹೋದೀತು ಜೋಕೆ!